

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಇಂದು ಇಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕವಾದ 'ಸಾಹಸ ಸ್ಮಾರಕ'ದಿಂದ ಬರುವ ಆದಾಯವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ ಎಂದು ನಟ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಹೇಳಿದ್ದಾರೆ.
2009ರ ಡಿಸೆಂಬರ್ 30ರಂದು ಡಾ. ವಿಷ್ಣುವರ್ಧನ್ ನಿಧನರಾದರು. ಅವರ ನೆನಪಲ್ಲಿ ಸ್ಮಾರಕ್ಕೆ ಕಟ್ಟಬೇಉ ಎಂದು ಅವರ ಅಭಿಮಾನಿಗಳ ಆಸೆಯಾಯಿತು. ಕಾರಣಾಂತರಗಳಿಂದ, 13 ವರ್ಷ ತಡವಾದರೂ ಇದೀಗ ಮೈಸೂರು ಮತ್ತು ನಂಜನಗೂಡು ಮಾರ್ಗ ಮಧ್ಯೆ ಇರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗಿದೆ.
ಸ್ಮಾರಕದ ಉದ್ಘಾಟನೆಯ ನಂತರ ಮಾತನಾಡಿದ ಅನಿರುದ್ಧ್, 'ವಿಷ್ಣುವರ್ಧನ್ ಅವರ ಪ್ರತಿಮೆಯ ಪಕ್ಕದಲ್ಲಿ ಎರಡು ಸಿಂಹಗಳು ಇರುತ್ತವೆ. ಈ ಸ್ಮಾರಕ ವೃತ್ತಾಕರದಲ್ಲಿದೆ. ಅಮರ ಜೀವಿಗಳಿಗೆ ಪುಷ್ಪ ಚಕ್ರ ಅರ್ಪಿಸುತ್ತಾರೆ. ಹಾಗಾಗಿ, ಸ್ಮಾರಕವು ವೃತ್ತಾಕಾರದಲ್ಲಿ ಇರಬೇಕು ಎಂದು ತೀರ್ಮಾನ ಮಾಡಿದೆವು. ಈ ಸ್ಮಾರಕದ ಸುತ್ತಲೂ ವೃತ್ತಾಕಾರದ ಸುತ್ತಲೂ ವಿವಿಧ ಬಗೆಯ ಪುಷ್ಪ ಸಸಿಗಳನ್ನ ನೆಡಲಾಗಿದೆ. ಅವರು ಬೆಳೆದು ನಿಂತ ಮೇಲೆ, ಮೇಲಿನಿಂದ ಸ್ಮಾರಕವು ಪುಷ್ಪ ಚಕ್ರದಂತೆ ಕಾಣಿಸುತ್ತದೆ' ಎಂದರು.
ಈ ಸ್ಮಾರಕದ ಬಳಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಗಬೇಕು ಎಂದ ಅವರು, 'ಅದು ಅಪ್ಪಾವ್ರ ಹೆಸರಲ್ಲಿ ಆಗಬೇಕು ಅಂತ ತೀರ್ಮಾನ ಮೊದಲೇ ತೀರ್ಮಾನವಾಗಿತ್ತು. ಅದರಂತೆ ಸ್ಮಾರಕ ನಿರ್ಮಾಣವಾಗಿ ಉಳಿದ ಜಾಗದಲ್ಲಿ ಈ ಇನ್ಸ್ಟಿಟ್ಯೂಟ್ ನಿರ್ಮಾಣವಾಗಲಿದೆ. ಈ ಸ್ಮಾರಕದಲ್ಲಿ ವಿಷ್ಣು ಅವರ ಪ್ರತಿಮೆ, ಫೋಟೋ ಗ್ಯಾಲರಿ, ಆಡಿಟೋರಿಯಂ ಮತ್ತು ಸಿನಿಮಾ ಥಿಯೇಟರ್ ಇರಲಿದೆ. ಇಲ್ಲಿ ಚಿತ್ರೋತ್ಸವ, ನಾಟಕೋತ್ಸವ, ಶಿಬಿರ ಮಾಡುವ ಯೋಚನೆ ಇದೆ. ಈ ಸ್ಮಾರಕದ ನಿರ್ವಹಣೆ ರಾಜ್ಯ ಸರ್ಕಾರ ನೋಡಿಕೊಳ್ಳಲಿದ್ದು, ಇದರಿಂದ ಬರುವ ಆದಾಯ ಸಹ ಸರ್ಕಾರದ ಬೊಕ್ಕಸಕ್ಕೆ ಹೋಗಲಿದೆ' ಎಂದು ಅವರು ಹೇಳಿದರು.