ಏರಿಳಿತಗಳ ದಾಟಿ 'ತೆರೆ'ದುಕೊಳ್ಳಲಿದೆ ಗೋರಿಯ ಒಳಗೊಂದು ಪ್ರೀತಿಯ ಸಮಾಧಿ!

Gori
Published on

ಬೆಂಗಳೂರು: ‘ನಾನು ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿ. ಮೊದಲಿಂದಲೂ ಅವರ ಸಿನಿಮಾ ನೋಡಿಕೊಂಡು ಈ ಹಂತಕ್ಕೆ ಬಂದಿದ್ದೇನೆ. ಇದೀಗ ಅವರ ಸಿನಿಮಾ ಬಿಡುಗಡೆ ದಿನದಂದೇ ನನ್ನ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಒಂದು ಕಾರಣಕ್ಕೆ ಅವರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ’ - ಹೀಗೆ ಕ್ಷಮೆ ಕೇಳುವ ಮೂಲಕ ‘ಗೋರಿ’ ಚಿತ್ರದ ನಾಯಕ ನಟ ಕಿರಣ್ ಮಾತು ಆರಂಭಿಸಿದರು.

ಗೋಪಾಲಕೃಷ್ಣ ನಿರ್ದೇಶನದ ‘ಗೋರಿ - ಪ್ರೀತಿಯ ಸಮಾಧಿ’ ಚಿತ್ರ ಇಂದು (ನ.26) ತೆರೆಗೆ ಬರುತ್ತಿದೆ. ಚಿತ್ರದ ಕುರಿತಾಗಿ ಮಾಹಿತಿ ನೀಡುವ ಉದ್ದೇಶಕ್ಕೆ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಈ ವೇಳೆ ಸಿನಿಮಾ ಬಗ್ಗೆ ಮಾತನಾಡಿದ ಕಿರಣ್, ‘ಒಂದಷ್ಟು ಏರಿಳಿತಗಳನ್ನು ಎದುರಿಸಿ ಬಿಡುಗಡೆ ಹಂತದವರೆಗೆ ಬಂದಿದ್ದೇವೆ. ಚಿತ್ರರಂಗದಲ್ಲಿ ಏನಾದರೂ ಮಾಡಬೇಕೆಂಬ ಹಠವಿತ್ತು. ಇದೀಗ ಗಾಡ್​ಫಾದರ್ ಇಲ್ಲದೆ ಇಲ್ಲಿಯವರೆಗೂ ಬಂದಿದ್ದೇವೆ. ನೋಡಿ ಹರಸಿ’ ಎನ್ನುವ ಅವರು, ‘ನಮ್ಮ ಈ ಸಿನಿಮಾದಲ್ಲಿಯೂ ಎಲ್ಲ ಚಿತ್ರಗಳಲ್ಲಿ ಇರುವಂತೆ ಪ್ರೀತಿ ಇದೆ. ಆದರೆ, ಅದನ್ನು ಬೇರೆ ರೀತಿಯಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ.

‘ಜಾತಿ-ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ನಾಲ್ಕು ಹಾಡು, ಮೂರು ಫೈಟ್ ಈ ಚಿತ್ರದಲ್ಲಿದೆ’ ಎಂದರು ನಿರ್ದೇಶಕ ಗೋಪಾಲಕೃಷ್ಣ. ನಾಯಕಿಯಾಗಿ ಸ್ಮಿತಾ ನಟಿಸಿದ್ದು, ಜಿತೇಂದ್ರ ಸವಣೂರು ಪ್ರಮುಖ ಪಾತ್ರದಲ್ಲಿದ್ದಾರೆ. ಹಾವೇರಿ ಟಾಕೀಸ್ ನಿರ್ವಿುಸಿರುವ ಚಿತ್ರಕ್ಕೆ, ಮಂಜುನಾಥ್ ಹೆಗಡೆ ಛಾಯಾಗ್ರಹಣ, ವಿನು ಮನಸು ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net