ಆರ್​ಆರ್​ಆರ್ ಟ್ರೇಲರ್​ಗೆ ಬಹುಪರಾಕ್; ಜ. 7ಕ್ಕೆ ಸಿನಿಮಾ ರಿಲೀಸ್

RRR
Published on

ಬೆಂಕಿ ಸೀಳಿ ಬರುವ ಬಿಲ್ಲು, ದೈತ್ಯ ಹುಲಿಯ ಜತೆಗಿನ ಸೆಣಸಾಟ, ಗ್ರಾಫಿಕ್ಸ್ ಕುಸುರಿ.. ಕಿಕ್ಕೇರಿಸುವ ಕೀರವಾಣಿ ಸಂಗೀತ.. ಹೀಗೆ ಹತ್ತು ಹಲವು ವಿಶೇಷತೆಗಳಿಂದ ಗಮನ ಸೆಳೆದಿದೆ ‘ಆರ್​ಆರ್​ಆರ್’ ಚಿತ್ರದ ಟ್ರೇಲರ್. ಇಡೀ ಭಾರತೀಯ ಸಿನಿಮಾರಂಗ ಮತ್ತು ಪ್ರೇಕ್ಷಕ ವರ್ಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಗುರುವಾರ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಯೂಟ್ಯೂಬ್​ನಲ್ಲಿ ಟ್ರೆಂಡ್ ಸೃಷ್ಟಿಸುವುದರ ಜತೆಗೆ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೇಕಿಂಗ್​ನಿಂದ ಹಿಡಿದು, ಟ್ರೇಲರ್​ನಲ್ಲಿನ ಪ್ರತೀ ಫ್ರೇಮ್ ಅಷ್ಟೇ ರೋಮಾಂಚನಕಾರಿಯಾಗಿ ಮೂಡಿಬಂದಿರುವುದಲ್ಲದೆ, ಎಂದಿನಂತೆ ಗ್ರಾಫಿಕ್ಸ್ ಕೆತ್ತನೆ ಕೆಲಸ ಈ ಚಿತ್ರದಲ್ಲಿಯೂ ಎದ್ದು ಕಾಣಿಸುತ್ತದೆ. ಇನ್ನೇನು ಜನವರಿ 7ಕ್ಕೆ ಈ ದೃಶ್ಯ ಕಾವ್ಯ ವಿಶ್ವದಾದ್ಯಂತ ರಿಲೀಸ್ ಆಗಲಿದೆ.

ಸ್ವಾತಂತ್ರ್ಯ ಪೂರ್ವದ ಕಥೆಗೆ ಫಿಕ್ಷನ್ ಟಚ್: ಆರ್​ಆರ್​ಆರ್ ಸಿನಿಮಾ 1920ರ ಕಾಲಘಟ್ಟದಲ್ಲಿ ನಡೆದ ನೈಜ ಕಥೆ. ಅಲ್ಲುರಿ ಸೀತಾರಾಮ ರಾಜು ಮತ್ತು ಕೋಮರಮ್ ಭೀಮ್ ಎಂಬಿಬ್ಬರು ಯುವಕರು ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯವನ್ನು ಈ ಸಿನಿಮಾದಲ್ಲಿ ನಿರ್ದೇಶಕರು ಕಾಲ್ಪನಿಕ ಟಚ್ ನೀಡಿ ದೃಶ್ಯ ರೂಪಕ್ಕೆ ತಂದಿದ್ದಾರೆ. ಈ ಚಿತ್ರಕ್ಕೂ ಕಥೆ ಬರೆದಿದ್ದು, ರಾಜಮೌಳಿ ತಂದೆ ಕೆ. ವಿ. ವಿಜಯೇಂದ್ರ ಪ್ರಸಾದ್!

ರಾಮ್​ಚರಣ್​- ಎನ್​ಟಿಆರ್ ಪರಾಕ್ರಮ: ಇಡೀ ಸಿನಿಮಾ ನಿಂತಿರುವುದೇ ಈ ಜೋಡಿಯ ಮೇಲೆ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಇವರಿಬ್ಬರ ಸಾಹಸಗಾಥೆಯನ್ನೇ ನಿರ್ದೇಶಕರು ಕಣ್ಣುಕುಕ್ಕುವಂತೆ ತೋರಿಸಿದ್ದಾರೆ. ಬೃಹತ್ ಸೆಟ್​ಗಳ ಸಿಂಗಾರ, ಸಾವಿರಾರು ಜೂನಿಯರ್ ಕಲಾವಿದರು, ಅಪಾರ ವೆಚ್ಚವೂ ಟ್ರೇಲರ್​ನಲ್ಲಿ ಕಾಣಿಸುತ್ತ ಹೋಗುತ್ತದೆ.

ಟ್ರೆಂಡಿಂಗ್​ನಲ್ಲಿ ಟ್ರೇಲರ್: ಗುರುವಾರ ಬೆಳಗ್ಗೆ ಆರ್​ಆರ್​ಆರ್ ಚಿತ್ರದ ಟ್ರೇಲರ್ ತೆಲುಗು ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಿದೆ. ಈ 5 ಭಾಷೆಯ ಪೈಕಿ ತೆಲುಗಿನಲ್ಲಿ 1.4 ಕೋಟಿ, ಹಿಂದಿಯಲ್ಲಿ 95 ಲಕ್ಷ, ತಮಿಳಿನಲ್ಲಿ 20 ಲಕ್ಷ, ಮಲಯಾಳಂ ನಲ್ಲಿ 21 ಲಕ್ಷ ಮತ್ತು ಕನ್ನಡದಲ್ಲಿ 18 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ವೀಕ್ಷಕ ವಲಯದಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪೂರ್ಣ ಚಿತ್ರಕ್ಕೆ ಕಾಯುತ್ತಿರುವುದಾಗಿ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net