

ಬೆಂಗಳೂರು: ಆನ್ಲೈನ್ ಟಿಕೆಟ್ ಬುಕಿಂಗ್ ಆಪ್ನಿಂದ ಪದೇ ಪದೇ ಕನ್ನಡ ಚಿತ್ರಗಳಿಗೆ ಅನ್ಯಾಯ ಆಗುತ್ತಿದ್ದು, ಈಗ ಆ ಅನ್ಯಾಯದ ವಿರುದ್ಧ ವಿತರಕ ಕಮ್ ನಿರ್ಮಾಪಕ ಕಾರ್ತಿಕ್ ಗೌಡ ಮತ್ತು ನಿರ್ದೇಶಕ ಸಂತೋಷ್ ಆನಂದ್ರಾಮ್ ಧ್ವನಿಯೆತ್ತಿದ್ದಾರೆ.
ದಿಯಾ ಚಿತ್ರಕ್ಕೆ ಕಮ್ಮಿ ರೇಟಿಂಗ್: ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ‘ದಿಯಾ’ ಚಿತ್ರಕ್ಕೆ ಆನ್ಲೈನ್ ಟಿಕೆಟ್ ಬುಕಿಂಗ್ ಆಪ್ನಲ್ಲಿ ಕಡಿಮೆ ರೇಟಿಂಗ್ ಬಂದಿದೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಬೇಕಂತಲೇ ಕಡಿಮೆ ರೇಟಿಂಗ್ ಕೊಟ್ಟಿದ್ದಾರೆ. ಇನ್ನು ಈ ರೀತಿ ಫೇಕ್ ಅಕೌಂಟ್ನಿಂದ ಬಂದಿರುವ ಕಮೆಂಟ್ಗಳು ಒಂದೇ ರೀತಿಯಾಗಿವೆ’ಎಂದು ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ದನಿ ಗೂಡಿಸಿದ್ದು, ಟ್ವಿಟರ್ನಲ್ಲಿಯೇ ಆ ಆನ್ಲೈನ್ ಬುಕಿಂಗ್ ಆಪ್ ವಿರುದ್ಧ ಮಾತನಾಡಿದ್ದಾರೆ. ‘ನನಗೆ ಇದರ ಬಗ್ಗೆ ಬಹಳ ಜನ ಹೇಳುತ್ತಿದ್ದರು, ಆದರೆ ಸ್ವತಃ ನನಗೆ ಈಗ ಅನುಭವವಾಗಿದೆ. ಉತ್ತಮವಾಗಿರುವ ಸಿನಿಮಾ ಬಗ್ಗೆ ಚೆನ್ನಾಗಿಲ್ಲ ಎಂಬ ಕಮೆಂಟ್ಗಳು ಬಂದಿವೆ. ನಂತರ ಯಾರೋ ಒಬ್ಬರು ಕರೆ ಮಾಡಿ ನಿಮ್ಮ ಸಿನಿಮಾದ ರೇಟಿಂಗ್ ಕಡಿಮೆಯಿದೆ ಜಾಸ್ತಿ ಮಾಡುತ್ತೇವೆ ಹಣ ನೀಡಿ ಎಂಬ ಬೇಡಿಕೆ ಇಡುತ್ತಾರೆ. ಹಣ ನೀಡಿದರೆ ರೇಟಿಂಗ್ ಜಾಸ್ತಿಯಾಗುತ್ತಂತೆ. ಈ ಬಗ್ಗೆ ನಾನು ಆ ಆನ್ಲೈನ್ ಟಿಕೆಟ್ ಬುಕಿಂಗ್ ಆಪ್ಗೆ ಸಂಬಂಧಪಟ್ಟವರಿಗೆ ವಿವರಿಸಿದ್ದೇನೆ. ಅವರು ಇದರ ಬಗ್ಗೆ ಏನೂ ಉತ್ತರ ನೀಡಿಲ್ಲ’ಎನ್ನುತ್ತಾರೆ ಕಾರ್ತಿಕ್ ಗೌಡ.
ಸಂತೋಷ್ ಆನಂದ್ರಾಮ್ ಕಿಡಿ
ಇನ್ನು ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಟ್ವೀಟ್ ಮಾಡಿ ‘ ಎಲ್ಲ ಮಲ್ಟಿಪ್ಲೆಕ್ಸ್ಗಳು ಮತ್ತು ಆನ್ಲೈನ್ ಟಿಕೆಟ್ ಬುಕಿಂಗ್ ಆಪ್ಗಳು ಕರ್ನಾಟಕದಿಂದ ಮಾತ್ರ ಹೆಚ್ಚು ಹಣ ಮಾಡುತ್ತಿದ್ದೀರಾ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಕನ್ನಡಿಗರು ಹೆಚ್ಚಿನ ಹಣ ನೀಡಿ ನಿಮ್ಮ ವ್ಯಾಪಾರವನ್ನು ಹೆಚ್ಚು ಮಾಡುತ್ತಿದ್ದೇವೆ. ಹಾಗಾಗಿ ನಮ್ಮ ಸಿನಿಮಾಗಳನ್ನು ಸಪೋರ್ಟ್ ಮಾಡಿ’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುನಾಮಿ: ಇದೆಲ್ಲದರ ಜತೆಗೆ ಈ ವಾರ 10ಕ್ಕೂ ಹೆಚ್ಚು ಸಿನಿಮಾ ರಿಲೀಸ್ ಆಗಿದ್ದು, ಇದರಿಂದ ಪ್ರೇಕ್ಷಕರಿಗೆ ಯಾವ ಸಿನಿಮಾ ನೋಡಬೇಕು ಎಂಬ ಗೊಂದಲ ಉಂಟಾಗಿದೆ. ಜಂಟಲ್ವುನ್ ಮತ್ತು ಮಾಲ್ಗುಡಿ ಡೇಸ್ ಚಿತ್ರಗಳ ಹಗ್ಗ ಜಗ್ಗಾಟದಿಂದ ಕೆ ಜಿ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಎರಡೆರೆಡು ಶೋ ಹಂಚಿ ಕೊಳ್ಳುವಂತಾಗಿದೆ. ಹಾಗಾಗಿ ಜಂಟಲ್ವುನ್ ಚಿತ್ರ ಮಾಗಡಿ ರಸ್ತೆಯ ವಿರೇಶ್ನ್ನೇ ಪ್ರಮುಖ ಚಿತ್ರಮಂದಿ ರವನ್ನಾಗಿಸಿದೆ. ಒಟ್ಟಿನಲ್ಲಿ ಉತ್ತಮ ಕನ್ನಡ ಚಿತ್ರಗಳು ಬೇರೆ ಬೇರೆ ಕಾರಣಗಳಿಂದಾಗಿ ಸೊರಗುವಂತಾಗಿದೆ.
ಮೊದಲು ಚೆನ್ನಾಗಿಲ್ಲ ಎಂದು ಬರುವ ಕಮೆಂಟ್ಗಳು ಮತ್ತು ಕಡಿಮೆ ಇದ್ದ ರೇಟಿಂಗ್, ಹಣ ನೀಡಿದ ಕೂಡಲೇ ಜಾಸ್ತಿಯಾಗುತ್ತದೆ ಎಂದರೆ ಏನರ್ಥ. ಇದಕ್ಕೆ ಆ ಆನ್ಲೈನ್ ಬುಕಿಂಗ್ ಆಪ್ನವರೇ ಉತ್ತರಿಸಬೇಕು. ಇಲ್ಲ ಉದ್ದೇಶಪೂರ್ವಕವಾಗಿ ಹಾಕಿರುವ ಕಮೆಂಟ್ಗಳನ್ನು ಡಿಲೀಟ್ ಮಾಡಿ ಕನ್ನಡ ಚಿತ್ರಗಳಿಗೆ ಬೆಂಬಲ ನೀಡಬೇಕು. | ಕಾರ್ತಿಕ್ಗೌಡ ವಿತರಕ, ನಿರ್ವಪಕ