Ridhi Dogra: ಗ್ಲಾಮರ್ ಅಂದ್ರೆ ಲೈಫ್ ಅಲ್ಲ, ಭ್ರಮೆಯಲ್ಲಿ ಬದುಕಬೇಡಿ: ಯುವಕರಿಗೆ ರಿದ್ಧಿ ಡೋಗ್ರಾ ಸ್ವೀಟ್​​ ವಾರ್ನಿಂಗ್​​!

Ridhi Dogra
Ridhi Dogra
Published on
ಮುಂಬೈ: ಮನರಂಜನಾ ಜಗತ್ತು ಹೊರಗಿನಿಂದ ಎಷ್ಟು ವರ್ಣರಂಜಿತವಾಗಿ ಕಾಣಿಸುತ್ತದೆಯೋ, ಒಳಗಿನಿಂದ ಅಷ್ಟೇ ಕರಾಳವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಗ್ಲಾಮರ್ ಲೋಕದ ಇಬ್ಬರು ಉದಯೋನ್ಮುಖ ತಾರೆಗಳಾದ ಟ್ವಿಶಾ ಮತ್ತು ದೀಪಿಕಾ ಅವರ ಹಠಾತ್ ಸಾವು ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.
ಈ ಬೆನ್ನಲ್ಲೇ, ಖ್ಯಾತ ನಟಿ ರಿದ್ಧಿ ಡೋಗ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ಸುದೀರ್ಘ ಪತ್ರ ಈಗ ಸಿನಿಮಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. "ಗ್ಲಾಮರ್ ಲೋಕದಲ್ಲಿ ಯಾರು ಕೂಡ ಕಾಲ್ಪನಿಕ ಕಥೆಗಳ (Fairy Tales) ತರಹದ ಜೀವನವನ್ನು ನಿರೀಕ್ಷಿಸಬೇಡಿ" ಎಂದು ಅವರು ಸಿನಿಮಾ ರಂಗದ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಇದು ಕಾಲ್ಪನಿಕ ಲೋಕವಲ್ಲ!

ತಮ್ಮ ಪೋಸ್ಟ್‌ನಲ್ಲಿ ಚಿತ್ರರಂಗಕ್ಕೆ ಬರಬಯಸುವ ಯುವ ಪ್ರತಿಭೆಗಳಿಗೆ ನೇರ ಎಚ್ಚರಿಕೆ ನೀಡಿರುವ ರಿದ್ಧಿ, "ಇಲ್ಲಿ ಯಾವುದೇ ಸುಂದರ ಕಾಲ್ಪನಿಕ ಕಥೆಗಳು ಇರುವುದಿಲ್ಲ. ಹೊರಗಿನ ಚಮತ್ಕಾರಗಳನ್ನು ನೋಡಿ ಮೋಸಹೋಗಬೇಡಿ" ಎಂದಿದ್ದಾರೆ. "ಇಲ್ಲಿನ ಯಶಸ್ಸು ಮತ್ತು ವೈಭವ ಕೇವಲ ತಾತ್ಕಾಲಿಕ. ಚಿತ್ರರಂಗ ಎನ್ನುವುದು ಒಂದು ಕ್ರೂರ ವ್ಯಾಪಾರವಿದ್ದಂತೆ. ಇಲ್ಲಿ ಪ್ರತಿಯೊಬ್ಬರೂ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಇರುತ್ತಾರೆ" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಕಠಿಣ ಪರಿಶ್ರಮ ಮತ್ತು ಒಂಟಿತನ

"ಸಿನಿಮಾ ರಂಗದಲ್ಲಿ ನಿಮಗಾಗಿ ಯಾರೂ ರತ್ನಗಂಬಳಿ ಹಾಸಿ ಕಾಯುತ್ತಿರುವುದಿಲ್ಲ. ಇಲ್ಲಿ ದಿನದ 24 ಗಂಟೆಯೂ ತೀವ್ರ ಪೈಪೋಟಿ ಇರುತ್ತದೆ. ನೀವು ಎಷ್ಟೇ ಕಷ್ಟಪಟ್ಟರೂ ಕೆಲವೊಮ್ಮೆ ನಿರಾಸೆ ಕಾಯಂ" ಎಂದು ರಿದ್ಧಿ ಬರೆದಿದ್ದಾರೆ. "ಈ ಗ್ಲಾಮರ್ ಜಗತ್ತಿನಲ್ಲಿ ಒಂಟಿತನ ಎನ್ನುವುದು ದೊಡ್ಡ ಶಾಪ. ಯಶಸ್ಸಿನ ಉತ್ತುಂಗದಲ್ಲಿದ್ದಾಗ ಜೊತೆಗಿರುವವರು, ಸೋಲೊಪ್ಪಿಕೊಂಡಾಗ ಕಾಣಿಸುವುದೇ ಇಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ

ಇತ್ತೀಚಿನ ನಟಿಯರ ಸಾವಿನ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು, "ಯಾವುದೇ ಕೆಲಸ ಅಥವಾ ಸಿನಿಮಾ ನಿಮ್ಮ ಜೀವಕ್ಕಿಂತ ದೊಡ್ಡದಲ್ಲ. ಚಿತ್ರರಂಗ ನೀಡುವ ಮಾನಸಿಕ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು" ಎಂದು ಕಿವಿಮಾತು ಹೇಳಿದ್ದಾರೆ."ನಿಮ್ಮ ಸುತ್ತಮುತ್ತ ಒಳ್ಳೆಯ ಸ್ನೇಹಿತರನ್ನು ಮತ್ತು ಸದಾ ಬೆಂಬಲ ನೀಡುವ ಕುಟುಂಬವನ್ನು ಇಟ್ಟುಕೊಳ್ಳಿ. ಮಾನಸಿಕವಾಗಿ ಕುಗ್ಗಿದಾಗ ತಕ್ಷಣ ಸಹಾಯ ಪಡೆದುಕೊಳ್ಳಿ" ಎಂದು ಅವರು ಯುವ ನಟ-ನಟಿಯರಲ್ಲಿ ವಿನಂತಿಸಿದ್ದಾರೆ.

ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಆತಂಕ

ಟ್ವಿಶಾ ಮತ್ತು ದೀಪಿಕಾ ಅವರ ಸಾವುಗಳು ಸಿನಿಮಾ ತಾರೆಯರ ವೈಯಕ್ತಿಕ ಜೀವನ ಮತ್ತು ಶೂಟಿಂಗ್ ಸೆಟ್‌ಗಳಲ್ಲಿ ಎದುರಿಸುವ ಮಾನಸಿಕ ಕಿರುಕುಳದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಮನರಂಜನಾ ಉದ್ಯಮದಲ್ಲಿ ಕಲಾವಿದರ ಸುರಕ್ಷತೆ ಮತ್ತು ಮಾನಸಿಕ ನೆರವಿಗಾಗಿ ಪ್ರತ್ಯೇಕ ವ್ಯವಸ್ಥೆ ಇರಬೇಕು ಎಂಬ ಒತ್ತಾಯಗಳು ಈಗ ಕೇಳಿಬರುತ್ತಿವೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net