ಕಲರ್ಸ್ ಕನ್ನಡದಲ್ಲಿ ಗಿಚ್ಚಿ ಗಿಲಿಗಿಲಿ

Gichcha
Published on

ಹಲವಾರು ವರ್ಷಗಳ ಕಾಲ ಅಭಿನಯವನ್ನೇ ಜೀವನ ಮಾಡಿಕೊಂಡು ನಟನೆಯನ್ನು ಅರೆದು ಕುಡಿದಿರುವ ಹತ್ತು ಮಂದಿ ಒಂದೆಡೆಯಾದರೆ, ನಟನೆಯ ಗಂಧಗಾಳಿ ಗೊತ್ತಿಲ್ಲದ ಇನ್ನೊಂದು ಹತ್ತು ಮಂದಿ ಇನ್ನೊಂದೆಡೆ. ಈ ಇಪ್ಪತ್ತು ಮಂದಿಯನ್ನು ಒಟ್ಟು ಮಾಡಿ ಅಲ್ಲಿಂದ ಒಬ್ಬರು ಇಲ್ಲಿಂದ ಒಬ್ಬರನ್ನು ಜತೆಗೂಡಿಸಿ ಜನರನ್ನು ರಂಜಿಸಿ ಎಂದು ವೇದಿಕೆಗೆ ತಂದು ಬಿಟ್ಟರೆ ಏನಾದೀತು? ಇದಕ್ಕೆ ಉತ್ತರವೇ ಕಲರ್ಸ್ ಕನ್ನಡದಲ್ಲಿ ಈ ಶನಿವಾರದಿಂದ ಆರಂಭವಾಗುತ್ತಿರುವ ‘ಗಿಚ್ಚಿ ಗಿಲಿಗಿಲಿ’ ಎಂಬ ಹೊಸ ರಿಯಾಲಿಟಿ ಶೋ.

‘ಮಜಾಭಾರತ’ ಖ್ಯಾತಿಯ ಕಾರ್ತಿಕ್, ರಾಘವೇಂದ್ರ, ಶಿವು, ವಿನೋದ್ ಗೊಬ್ಬರಗಾಲ, ಚಂದ್ರಪ್ರಭ, ಚಿಲ್ಲರ್ ಮಂಜು, ಪಿ.ಕೆ., ಸುಶ್ಮಿತಾ, ಮಾನಸಾ ಮತ್ತು ಜಗ್ಗಪ್ಪ ಕಾಮಿಡಿಯಲ್ಲಿ ಎತ್ತಿದ ಕೈ. ಇವರ ಜತೆಗೆ ‘ರಾಜಾ ರಾಣಿ’ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಅಯ್ಯಪ್ಪ, ಶ್ರೀಕಾಂತ್, ನಿವೇದಿತಾ ಗೌಡ, ಪುಟಾಣಿ ವನ್ಶಿಕಾ ಅಂಜನಿ ಕಶ್ಯಪ್, ಸುದ್ದಿವಾಹಿನಿಯ ನಿರೂಪಕಿ ದಿವ್ಯಾ ವಸಂತ್, ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ಸೌಮ್ಯಾ ಮತ್ತು ಪ್ರಶಾಂತ್, ಹಿನ್ನೆಲೆ ಗಾಯಕಿ ‘ಜೋಗಿ’ ಸುನೀತಾ, ‘ಎದೆ ತುಂಬಿ ಹಾಡುವೆನು’ ನಿರೂಪಕಿ ಅಂಕಿತಾ ಅಮರ್ ಅವರ ತಂಗಿ ಅನನ್ಯಾ ಅಮರ್, ನಿರೂಪಕ ನಿರಂಜನ್ ದೇಶಪಾಂಡೆ ಪತ್ನಿ ಯಶಸ್ವಿನಿ ದೇಶಪಾಂಡೆ ಈ ಶೋದಲ್ಲಿರಲಿದ್ದಾರೆ. ಸೖಜನ್ ಲೋಕೇಶ್, ಹಿರಿಯ ನಟಿ ಶ್ರುತಿ ತೀರ್ಪಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಂಜು ಪಾವಗಡ ಮತ್ತು ಕ್ರಿಕೆಟ್ ನಿರೂಪಕಿ ರೀನಾ ಡಿ’ಸೋಜಾ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ‘‘ರಾಜಾ ರಾಣಿ, ‘ನನ್ನಮ್ಮ ಸೂಪರ್​ಸ್ಟಾರ್​’ ನಂತಹ ಹೊಸ ಬಗೆಯ ಕಾರ್ಯಕ್ರಮಗಳ್ನು ನೀಡಿದ ನಂತರ ಒಂದು ವಿಭಿನ್ನವಾದ ಕಾರ್ಯಕ್ರಮಗಳನ್ನು ನೀಡುವುದು ನಮ್ಮ ಆಸೆಯಾಗಿತ್ತು. ಅದಕ್ಕಾಗಿ ಅಭಿನಯ ಬರುವ ಮತ್ತು ಅಭಿನಯ ಗೊತ್ತಿಲ್ಲದ ಇಬ್ಬಿಬ್ಬರನ್ನು ಜತೆ ಮಾಡುವ ಹೊಸ ಕಾನ್ಸೆಪ್ಟ್ ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಕಲರ್ಸ್ ಕನ್ನಡ ಪ್ರೋಗ್ರಾಮಿಂಗ್ ಹೆಡ್ ಪ್ರಕಾಶ್ ಗೋಪಾಲಕೖಷ್ಣನ್. ‘ಗಿಚ್ಚಿ ಗಿಲಿಗಿಲಿ’ಯ ಟೈಟಲ್ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಸಂಯೋಜನೆ ಮಾಡಿದ್ದಾರೆ. ಏಪ್ರಿಲ್ 9ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net