ಬಂಧಿತ IRS ಅಧಿಕಾರಿ ಜತೆ ನವ್ಯಾ ಡೇಟಿಂಗ್​? ದುಬಾರಿ ಗಿಫ್ಟ್​ ರಹಸ್ಯ ಹಿಂದೆ ಬಿದ್ದ ಇಡಿ, ನಟಿಯ ಕುಟುಂಬಸ್ಥರು ಹೇಳಿದ್ದಿಷ್ಟು…

Navya Nair ED Officials
Published on

ಕೊಚ್ಚಿ: ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಇತ್ತೀಚೆಗೆ ಬಂಧನವಾಗಿರುವ ಐಆರ್​ಎಸ್​ ಅಧಿಕಾರಿ ಸಚಿನ್​ ಸಾವಂತ್​ ಜತೆ ಮಲಯಾಳಂ ನಟಿ ನವ್ಯಾ ನಾಯರ್​ಗೆ ಇರುವ ಸಂಬಂಧದ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸಚಿನ್​ ಸಾವಂತ್​ ಮತ್ತು ನವ್ಯಾ ನಾಯರ್​ ನಡುವೆ ನಿಕಟ ಸಂಪರ್ಕವಿದ್ದು, ದುಬಾರಿ ಚಿನ್ನಾಭರಣವನ್ನು ನವ್ಯಾ ಅವರು ಸಚಿನ್​ರಿಂದ ಉಡುಗೊರೆಯಾಗಿ ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ, ಇಬ್ಬರು ಡೇಟಿಂಗ್​ ಮಾಡುತ್ತಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ.

ಬೇರೇನೂ ಇಲ್ಲ

ಈ ಸುದ್ದಿ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ನವ್ಯಾ ಅವರ ಕುಟುಂಬದ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ಬಹಳ ಹಿಂದಿನಿಂದಲೂ ನಮಗೆ ಪರಿಚಿತರು. ಅವರು ಅನೇಕ ಬಾರಿ ಗುರುವಾಯೂರು ದೇವಸ್ಥಾನಕ್ಕೆ ಬಂದಾಗ ಅವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆವು. ನವ್ಯಾ ಅವರ ಪುತ್ರನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿರುವುದನ್ನು ಬಿಟ್ಟರೆ, ಅವರಿಂದ ಬೇರೆ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಇಡಿ ವಿಚಾರಣೆ ವೇಳೆ ಹೇಳಿದೆ.

10 ಬಾರಿ ಭೇಟಿ

ಆದರೆ, ನವ್ಯಾ ಹಾಗೂ ಸಚಿನ್​ ಸಂಬಂಧದ ಬಗ್ಗೆ ಇಡಿ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಸಚಿನ್ ಸಾವಂತ್ ಮತ್ತು ನವ್ಯಾ ಇಬ್ಬರ ಫೋನ್ ವಿವರಗಳನ್ನು ಪರಿಶೀಲಿಸಿದ್ದಾರೆ. ನಟಿಯನ್ನು ಭೇಟಿಯಾಗಲು ಸಚಿನ್​ ಅವರು 8 ರಿಂದ 10 ಬಾರಿ ಕೊಚ್ಚಿಗೆ ಹೋಗಿದ್ದರು ಎಂದು ವರದಿಯಾಗಿದೆ. ಅಲ್ಲದೆ, ಇಬ್ಬರ ನಡುವೆ ವಾಟ್ಸ್​ಆ್ಯಪ್​ ಚಾಟ್​​ ಕೂಡ ನಡೆದಿದೆ. ಆದರೆ, ನಾವಿಬ್ಬರು ಸ್ನೇಹಿತರು ಮಾತ್ರ, ನಮ್ಮ ನಡುವೆ ಬೇರೆ ಸಂಬಂಧ ಏನೂ ಇಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ನವ್ಯಾ ನಾಯರ್​ ಬಗ್ಗೆ ಮಾಹಿತಿ ನಮೂದಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 27ರಂದು ಲಕ್ನೋದಲ್ಲಿ ಸಚಿನ್​ರನ್ನು ಇಡಿ ಬಂಧಿಸಿತು.

ನಟಿ ನವ್ಯಾ ನಾಯರ್​ ಅವರು ದರ್ಶನ್​ ಅಭಿನಯದ ಗಜ, ಬಾಸ್​ ಹಾಗೂ ರವಿಚಂದ್ರನ್​ ಅಭಿನಯದ ದೃಶ್ಯ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸದ್ಯ ಮಲಯಾಳಂ ಸಿನಿ ರಂಗದಲ್ಲಿ ಬಿಜಿಯಾಗಿದ್ದು, ಇದರ ನಡುವೆ ನವ್ಯಾಗೆ ಇಡಿ ಬಿಸಿ ಮುಟ್ಟಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net