‘ಗರಡಿ’ ಸೂರ್ಯನ ಪಟ್ಟು; ಯೋಗರಾಜ್ ಭಟ್ ನಿರ್ದೇಶನದ ದೇಸೀ ಕಲೆ ಕುರಿತ ಚಿತ್ರ

garadi
Published on

| ಪ್ರಮೋದ ಮೋಹನ ಹೆಗಡೆ

ಯೋಗರಾಜ್ ಭಟ್ ನಿರ್ದೇಶನದ ಹೊಸ ಸಿನಿಮಾ ‘ಗರಡಿ’. ಬಿ.ಸಿ. ಪಾಟೀಲ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರದಲ್ಲಿ ನಾಯಕನಾಗಿ ನಟ ಯಶಸ್ ಸೂರ್ಯ ಮಿಂಚಲು ರೆಡಿಯಾಗಿದ್ದಾರೆ. ಕುಸ್ತಿಗೆ ಸಂಬಂಧಿಸಿದ ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವ ಯಶಸ್, ಸಿನಿಮಾ, ಪಾತ್ರ ಹಾಗೂ ಚಿತ್ರೀಕರಣದ ಅನುಭವವನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.

ಪಿಸ್ತಾ, ಬಾದಾಮಿ ರುಬ್ಬೋ ಹುಡುಗ:
‘ಗರಡಿ’ ಚಿತ್ರದಲ್ಲಿ ಸೂರ್ಯ ಪಾತ್ರದ ಬಗ್ಗೆ, ‘ಗರಡಿಮನೆಯಲ್ಲಿ ಕೆಲಸ ಮಾಡುವ ಹುಡುಗನ ಪಾತ್ರ. ಪಿಸ್ತಾ, ಬಾದಾಮಿ ರುಬ್ಬಿಕೊಂಡು, ಪೈಲ್ವಾನರಿಗೆ ಮಸಾಜ್ ಮಾಡಿಕೊಂಡು ಇರುತ್ತೇನೆ. ಅದೇ ವಾತಾವರಣದಲ್ಲಿ ಬೆಳೆದು ನಂತರ ಹೇಗೆ ಅಖಾಡಕ್ಕಿಳಿಯುತ್ತೇನೆ? ಯಾವ ಘಟನೆ ನನ್ನನ್ನು ಬದಲಾಯಿಸುತ್ತದೆ ಎನ್ನುವುದೇ ಕಥೆ’ ಎನ್ನುತ್ತಾರೆ.

ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ
ಕುಸ್ತಿ ಪಟುವಾಗಿ ಕಾಣಿಸಿಕೊಳ್ಳುತ್ತಿರುವ ಸೂರ್ಯ ಪಾತ್ರದ ತಯಾರಿ ಬಗ್ಗೆ, ‘ಸಿನಿಮಾಕ್ಕಾಗಿ ಯೋಗರಾಜ್ ಭಟ್ 3 ತಿಂಗಳ ತರಬೇತಿ ಕೊಡಿಸಿದ್ದರು. ಬಿ.ಸಿ ಪಾಟೀಲ್ ಕೂಡ ಅಲ್ಲಿಗೆ ಬರುತ್ತಿದ್ದರು. ಗರಡಿಮನೆಯಲ್ಲಿ ಪ್ರತಿದಿನ ನಿಜವಾದ ಪೈಲ್ವಾನರ ಜತೆ ಕುಸ್ತಿ ಪ್ರಾಕ್ಟೀಸ್ ಇರುತ್ತಿತ್ತು. ಬೆಳಗ್ಗೆ ಜಿಮ್, ಸಂಜೆ ಆ್ಯಕ್ಟಿಂಗ್ ಕ್ಲಾಸ್, ರಾತ್ರಿ ಡಾನ್ಸ್ ಕ್ಲಾಸ್ ಮುಗಿಸಿ ಮನೆಗೆ ಹೋಗುವ ಹೊತ್ತಿಗೆ ಸುಸ್ತಾಗಿರುತ್ತಿತ್ತು. ಏಪ್ರಿಲ್‌ನ ಸುಡು ಬಿಸಿಲಿನಲ್ಲಿ ಶೂಟಿಂಗ್ ಆಗಿದ್ದು. ಆಗಲೂ ಅಷ್ಟೆ, ಅಖಾಡಕ್ಕೆ ಹಾಕಿದ ಮರಳೆಲ್ಲ ಕಾದು ಹತ್ತು ನಿಮಿಷದಲ್ಲಿ ಕಾಲುಗಳು ಸುಡುತ್ತಿದ್ದವು. ಬೆಳಗ್ಗೆಯಿಂದ ಸಂಜೆವರೆಗೂ ಕುಸ್ತಿ ಮಾಡಬೇಕಿತ್ತು’ ಎಂದು ಹೇಳುತ್ತಾರೆ.

ಚಾಲೆಂಜಿಂಗ್ ಕುಸ್ತಿ:
ಎಷ್ಟೇ ಮೈ ಹುರಿಗೊಳಿಸಿದ್ದರೂ ಆಗಾಗ ಪೆಟ್ಟು ತಿಂದ ಬಗ್ಗೆ ಯಶಸ್, ‘ನಾನು 70 ಕೆ.ಜಿ. ಆದರೆ, 140 ಕೆ.ಜಿ ಇರುವ ಪಟುವಿನ ಜತೆ ಕುಸ್ತಿ ಮಾಡುವುದೇ ದೊಡ್ಡ ಸವಾಲಾಗಿತ್ತು. ಅವರು ನಿಧಾನಕ್ಕೆ ಕೈ ಬೀಸಿದರೂ ನಮಗೆ ಏಟು ಬೀಳೋದು. ಆ ರೀತಿ ಸಿಕ್ಕಾಪಟ್ಟೆ ಏಟು ತಿಂದಿದೀನಿ. ಒಂದು ಸನ್ನಿವೇಶದಲ್ಲಂತೂ ನನ್ನ ಮುಖಕ್ಕೆ ಏಟು ಬಿದ್ದಿತ್ತು’ ಎಂದು ಹೇಳುತ್ತಾರೆ ಸೂರ್ಯ.

ಭಟ್ರು ಮತ್ತು ಬಿ.ಸಿ ಪಾಟೀಲ್ ಜತೆಗಿನ ಅನುಭವ:

ಯಶಸ್‌ಗೆ ಹತ್ತು ವರ್ಷದ ಹಿಂದೆಯೇ ಯೋಗರಾಜ್ ಭಟ್ ಜತೆ ಕೆಲಸ ಮಾಡುವ ಆಸೆಯಿತ್ತಂತೆ. ‘ನನ್ನ ಕನಸೊಂದು ಈಡೇರಿದಂತಾಗಿದೆ. ಯೋಗರಾಜ್ ಭಟ್ ಬಹಳ ತಮಾಷೆಯಾಗಿರುತ್ತಾರೆ. ಆದರೆ ಯಾವಾಗ ಸಿಟ್ಟಾಗುತ್ತಾರೆ ಅಂತ ಹೇಳೋಕೆ ಆಗಲ್ಲ. ಸೆಟ್‌ನಲ್ಲಿ ಅವರ ಡೆಡಿಕೇಷನ್, ಸಿನಿಮಾ ಬಗ್ಗೆ ಅವರಿಗಿರುವ ಪ್ರೀತಿ, ಇನ್ನೂ ಏನಾದರು ಮಾಡಬೇಕು ಎನ್ನುವು ಹೊಸ ಹುರುಪು ನಮ್ಮಲ್ಲಿ ಸದಾ ಸ್ಫೂರ್ತಿ ತುಂಬುತ್ತದೆ. ಸಿನಿಮಾ ಶೂಟಿಂಗ್ ವೇಳೆ ಬಿ.ಸಿ ಪಾಟೀಲ್ ಮಿನಿಸ್ಟರ್ ಆಗಿದ್ದರು. ಆಗಲೂ ಅವರು ನಮ್ಮೊಂದಿಗೆ ಸರಳತೆಯಿಂದ ಇರುತ್ತಿದ್ದರು. ಸೆಟ್‌ನಲ್ಲಿ ಸಾಮಾನ್ಯ ಕಲಾವಿದನಂತೆ ಇರುತ್ತಿದ್ದರು’ ಎನ್ನುತ್ತಾರೆ ಸೂರ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net