ಅದೇ ಬೇರೆ ಇದೇ ಬೇರೆ; ಸಖತ್ ಗುಂಗಿನಲ್ಲಿ ಗಣೇಶ್..

Ganesh
Published on

| ಚೇತನ್ ನಾಡಿಗೇರ್

‘ನಾವು ‘ಚಮಕ್’ ಮಾಡಿದಾಗ, ಜಾಸ್ತಿ ಕ್ರೆಡಿಟ್ ಗಣೇಶ್​ಗೆ ಹೋಯಿತು. ನನಗೆ ಹೊಟ್ಟೆಯುರಿಯಾಯಿತು. ಮುಂದಿನ ಚಿತ್ರದಲ್ಲಿ ಅವರ ನಟನೆ ಕಟ್ ಮಾಡಬೇಕು ಎಂದು ಅಂಧನ ಪಾತ್ರ ಕೊಟ್ಟೆ. ಇಡೀ ಸಿನಿಮಾದಲ್ಲಿ ಅವರು ಅಂಧನೋ, ಅಲ್ಲವೋ ಗೊತ್ತಿಲ್ಲ. ಆದರೆ, ಅವರಿಗೆ ಕನ್ನಡಕ ಇದೆ. ಭಾವನೆಗಳು ಗೊತ್ತಾಗಬಾರದು, ಅವರು ಕಣ್ಣಲ್ಲೇ ಮಾತಾಡ ಬಾರದು ಅಂತ ಹೀಗೆ ಮಾಡಿದೆ ...’ ಹೀಗೆ ಹೇಳಿದ್ದು ಸಿಂಪಲ್ ಸುನಿ. ಇಂದು ಬಿಡುಗಡೆಯಾಗುತ್ತಿರುವ ‘ಸಖತ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ನಡೆಯಿತು. ಚಿತ್ರದಲ್ಲಿ ಗಣೇಶ್ ಅವರಿಗೆ ಕಣ್ಣು ಕಾಣುತ್ತದೋ-ಇಲ್ಲವೋ, ಇದು ಹಿಂದಿಯ ‘ಅಂಧಾಧುನ್’ನ ರಿಮೇಕ್ ಹೌದೋ-ಇಲ್ಲವೋ ಎಂದು ಉತ್ತರಿಸಿ ಸುಸ್ತಾಗಿರುವ ಸುನಿ, ಹೀಗೆ ತಮಾಷೆ ಮಾಡಿದ್ದಾರೆ. ಆದರೆ, ‘ಅಂಧಾಧುನ್’ ಎಂಬ ಚಿತ್ರವಿದೆ ಎಂದು ಕನ್ನಡಿಗರಿಗೆ ಗೊತ್ತಾಗುವ ಮೊದಲೇ, ಗಣೇಶ್ ಈ ಕಥೆ ಕೇಳಿದ್ದರಂತೆ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದಿನ ಕಥೆಯಿದು: ‘2017ರಲ್ಲಿ ಸುನಿ ಎರಡು ಸ್ಕ್ರಿಪ್ಟ್ ತಂದಿದ್ದರು. ಒಂದು ‘ಚಮಕ್’. ಇನ್ನೊಂದು ‘ಸಖತ್’. ‘ಚಮಕ್’ ಸ್ಕ್ರಿಪ್ಟ್ ಪಕ್ಕಾ ಆಗಿತ್ತು. ಇದರ ಒನ್​ಲೈನ್ ಮಾತ್ರ ಆಗಿತ್ತು. ಸ್ಕ್ರಿಪ್ಟ್ ಸಂಪೂರ್ಣವಾಗಬೇಕಿತ್ತು. ಮೇಲಾಗಿ, ನಾವಿಬ್ಬರೂ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದರಿಂದ ‘ಚಮಕ್’ ಆಯ್ಕೆ ಮಾಡಿಕೊಂಡೆವು. ‘ಸಖತ್’ ಸ್ವಲ್ಪ ಪ್ರಯೋಗಾತ್ಮಕವಾಗಿದ್ದರಿಂದ, ಆ ನಂತರ ಮಾಡಿದರಾಯಿತು ಎಂದು ಎತ್ತಿಟ್ಟುಕೊಂಡೆವು. ನಾನು ಈ ಕಥೆ ಕೇಳಿದಾಗ, ‘ಅಂಧಾಧುನ್’ ಇನ್ನೂ ಬಂದಿರಲಿಲ್ಲ. ಆ ನಂತರ ಆ ಚಿತ್ರ ಬಂದಾಗ ಆಶ್ಚರ್ಯವಾಯಿತು. ನಮ್ಮ ಕಥೆಗೂ, ಆ ಕಥೆಗೂ ಏನಾದರೂ ಸ್ವಾಮ್ಯತೆ ಇರಬಹುದಾ ಎಂದನಿಸಿತು. ಆದರೆ, ಚಿತ್ರ ನೋಡಿದಾಗ, ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಎಲ್ಲರೂ ಆ ಚಿತ್ರಕ್ಕೂ, ಆ ಚಿತ್ರಕ್ಕೂ ಏನಾದರೂ ಸಂಬಂಧವಿರಬಹುದು ಎಂದುಕೊಂಡಿರಬಹುದು. ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ಗಣೇಶ್.

ಹಳೇ ಇಮೇಜು, ಹೊಸ ಪ್ರಯೋಗ: ‘ಇದುವರೆಗೂ ಜನ ನನ್ನ 35 ಸಿನಿಮಾ ನೋಡಿರುತ್ತಾರೆ. ಹೊಸ ಪ್ರಯೋಗ ಮಾಡುವಾಗ, ಹಳೆಯದನ್ನೂ ನೆನಪಿಸಬೇಕು. ಹಾಗೆಯೇ, ಹೊಸ ಬದಲಾ ವಣೆಯೂ ಕಾಣಬೇಕು. ಈ ಚಿತ್ರ ಒಪ್ಪಿದಾಗ, ನಟಿಸುವಾಗ ಎಷ್ಟು ಖುಷಿಯಾಯಿತೋ, ಸಿನಿಮಾ ನೋಡಿದಾಗ ಡಬ್ಬಲ್ ಖುಷಿಯಾಯಿತು’ ಎನ್ನುತ್ತಾರೆ ಗಣೇಶ್.

ಅಂಧನ ಪಾತ್ರವೇ ಹೈಲೈಟ್: ‘ಪ್ರಮುಖವಾಗಿ ನಾನು ಇದುವರೆಗೂ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೇಲಾಗಿ ಒಬ್ಬ ನಟನಾಗಿ ನನಗೆ ಈ ಚಿತ್ರದಲ್ಲಿ ಹೊಸ ಆಯಾಮ, ಬಾಡಿ ಲಾಂಗ್ವೇಜ್, ಮ್ಯಾನರಿಸಂ ಸಿಕ್ಕಿದೆ. ಜತೆಗೆ ಮನರಂಜನೆ, ರಿಯಾಲಿಟಿ ಶೋ, ಕುರುಡನೋ ಅಲ್ಲವೋ ಎಂಬ ಗೊಂದಲ, ಕೋರ್ಟ್​ರೂಂ ಡ್ರಾಮಾ ... ಇರುವುದರಿಂದ ತಕ್ಷಣವೇ ಒಪ್ಪಿದೆ. ಇಲ್ಲಿ ನನಗೆ ಉದ್ದುದ್ದ ಸಂಭಾಷಣೆಗಳಿಲ್ಲ. ಇಲ್ಲಿ ಪಂಚ್​ಗಳು ತುಂಬಾ ಇವೆ ಎನ್ನುತ್ತಾರೆ ಗಣೇಶ್.

ಇಬ್ಬರು ನಾಯಕಿಯರ ಮಧ್ಯೆ: ಗಣೇಶ್​ಗೆ ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮತ್ತು ಸುರಭಿ ನಾಯಕಿಯರಾಗಿ ನಟಿಸಿದ್ದಾರೆ. ಜತೆಗೆ ರಂಗಾಯಣ ರಘು, ಸಾಧು ಕೋಕಿಲ, ಧರ್ಮಣ್ಣ, ಗಿರಿ ಮುಂತಾದವರು ನಟಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್​ನಡಿ ನಿಶಾ ಕೋನಾ ವೆಂಕಟ್ ನಿರ್ವಿುಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net