ಕ್ಯಾಮರಾ ಬಗ್ಗೆ ನಟ ಗಣೇಶ್​ ಭಾವುಕ ಮಾತು; ತ್ರಿಬಲ್​ ರೈಡಿಂಗ್​ ಶೂಟಿಂಗ್​ ಶುರು

Ganesh
Published on

ಬೆಂಗಳೂರು: ಕಳೆದ ವರ್ಷ ಗಣೇಶ್​ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷ ಸಹ ಗಣೇಶ್​ ಅಭಿನಯದ ಒಂದೆರೆಡು ಚಿತ್ರಗಳು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿರುವಾಗಲೇ, ಲಾಕ್​ಡೌನ್​ನಿಂದಾಗಿ ಅದು ಈಡೇರಲಿಲ್ಲ. ಈ ವರ್ಷ ಗಣೇಶ್​ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗದಿದ್ದರೂ, ಸಿನಿಮಾ ಚಿತ್ರೀಕರಣ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲೇ ಗಣೇಶ್​, ‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಈ ಚಿತ್ರದ ಚಿತ್ರೀಕರಣ ಇಂದಿನಿಂದ ಶುರುವಾಗಿದ್ದು, ಎಂಟು ತಿಂಗಳ ನಂತರ ಕ್ಯಾಮರಾ ಎದುರಿಸುತ್ತಿರುವುದಕ್ಕೆ ಭಾವುಕವಾಗಿ ಬರೆದುಕೊಂಡಿದ್ದಾರೆ.

‘ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ. ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ. 6ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ಕ್ಯಾಮೆರಾ. ತ್ರಿಬಲ್ ರೈಡಿಂಗ್ ಚಿತ್ರೀಕರಣ ಶುರು. ನಿಮ್ಮ ಹಾರೈಕೆಯಿರಲಿ’ ಎಂದಿದ್ದಾರೆ.

ಅಂದಹಾಗೆ, ಈ ಹಿಂದೆ ವಿನೋದ್ ಪ್ರಭಾಕರ್​ ಅವರ ರಗಡ್ ಚಿತ್ರ ನಿರ್ದೇಶಿಸಿದ್ದ ಮಹೇಶ್​ ಗೌಡ, ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರಕ್ಕೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಮಹೇಶ್ ಅವರಿಗೆ ಆಗಿನಿಂದಲೂ ಗಣೇಶ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸಬೇಕು ಎಂಬ ಆಸೆ ಇತ್ತಂತೆ. ಅದು ಈಗ ಕೂಡಿ ಬಂದಿದ್ದು, ಶೂಟಿಂಗ್​ ಸಹ ಶುರುವಾಗಿದೆ.

ಕಾಮಿಡಿ, ಲವ್​, ಆಕ್ಷನ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರಕ್ಕೆ ನಾಯಕಿಯಾಗಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ನಟಿಸುವುದು ಅಧಿಕೃತವಾಗಿದೆ. ಮಿಕ್ಕಂತೆ ಸಾಧು ಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿದ್ದಾರೆ. ರಾಮ್​ಗೋಪಾಲ್ ಎನ್ನುವವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಯಿಕಾರ್ತಿಕ್​ ಮ್ಯೂಸಿಕ್​ ಕಂಪೋಸ್​ ಮಾಡಿದರೆ, ಆನಂದ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net