ತೆರೆಯ ಮೇಲೆ ಚಿತ್ರಕಲಾವಿದನ 'ಪರಿಸ್ಥಿತಿ' ಬಿಚ್ಚಿಟ್ಟ ಗಣೇಶ್​ ನಾರಾಯಣ್​ …

Paristithi
Published on

ಬೆಂಗಳೂರು: ಈ ಹಿಂದೆ 'ಹಾರ್ಟ್ ಬೀಟ್ಸ್​' ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಆರ್.ಎಸ್. ಗಣೇಶ್ ನಾರಾಯಣ್ ಈಗ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಜೀವನದಲ್ಲಿ ಅನೇಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕೆಲ ಪರಿಸ್ಥಿತಿಗಳನ್ನು ನಿಭಾಯಿಸಲು ಆ ವ್ಯಕ್ತಿ ಅಥವಾ ಆತನ ಸುತ್ತಲೂ ಇರುವ ಜನ ತೆಗೆದುಕೊಳ್ಳುವ ನಿರ್ಧಾರಗಳು ಆತನ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಅದೇರೀತಿ ರಸ್ತೆಯಲ್ಲಿ ಚಿತ್ರಬಿಡಿಸುತ್ತ ಜೀವನ ಸಾಗಿಸುವ ಕಲಾವಿದನೊಬ್ಬನ ಜೀವನದಲ್ಲಿ ಎದುರಾದ ಪರಿಸ್ಥಿತಿಯನ್ನು ಹೇಳುವ 'ಪರಿಸ್ಥಿತಿ' ಎಂಬ ಹೊಸ ಚಿತ್ರವನ್ನು ಅವರು ನಿರ್ದೇಶಿಸಿದ್ದಾರೆ.

ಶಿವಾನಿ ಫಿಲಂಸ್ ಮೂಲಕ ಎಂ.ಸಿ.ಎಂ.ಆರಾಧ್ಯ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ನಾನು ಗಣೇಶ್ ನಾರಾಯಣ್ ಬಹಳ ದಿನಗಳ ಸ್ನೇಹಿತರು. ಒಮ್ಮೆ ಹೀಗೇ ಮಾತಾಡುವಾಗ ಗಣೇಶ್, ಕಿರುಚಿತ್ರ ಮಾಡೋಣ ಎಂದು ಹೇಳಿದರು. ನಂತರ ಅದು ಸಿನಿಮಾ ಆಯಿತು. ಲೋ ಬಜೆಟ್ ಮೂವೀ ಆದರೂ ಸಿನಿಮಾ ರಿಚ್ ಆಗಿ ಬಂದಿದೆ' ಎನ್ನುತ್ತಾರೆ.

ಈ ಚಿತ್ರದಲ್ಲಿ ಚಿತ್ರಕಲಾವಿದನಾಗಿ ಗಣೇಶ್ ನಾರಾಯಣ್ ಅವರೇ ಅಭಿನಯಿಸಿದ್ದು, ನಮ್ರತಾ, ಅಜಿತ್ ಕುಮಾರ್, ಸಾಯಿಕೃಷ್ಣರೆಡ್ಡಿ, ತಂಗಾಳಿ ನಾಗರಾಜ್, ಶಿಲ್ಪಾ, ಜೋತಿರಾಜನ್ ಮುಂತಾದವರು ನಟಿಸಿದ್ದಾರೆ. ಗಣೇಶ್ ನಾರಾಯಣ್ ಅವರೇ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಗೌತಮ್ ಮನು ಛಾಯಾಗ್ರಹಣ ಮಾಡಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net