

ಚಿತ್ರ: ಗಂಧದ ಗುಡಿ
ನಿರ್ಮಾಣ: ಅಶ್ವಿನಿ ಪುನೀತ್ ರಾಜಕುಮಾರ್
ನಿರ್ದೇಶನ: ಅಮೋಘವರ್ಷ
ತಾರಾಗಣ: ಪುನೀತ್ ರಾಜಕುಮಾರ್, ಅಮೋಘವರ್ಷ
| ಚೇತನ್ ನಾಡಿಗೇರ್
ಪುನೀತ್ ರಾಜಕುಮಾರ್, 'ಗಂಧದ ಗುಡಿ' ಎಂಬ ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾದಾಗ ಹಲವು ಪ್ರಶ್ನೆಗಳು ಎದ್ದಿದ್ದವು. ಇದು ಕಮರ್ಷಿಯಲ್ ಚಿತ್ರವೋ ಅಥವಾ ಸಾಕ್ಷ್ಯಚಿತ್ರವೋ? ಇದರಲ್ಲಿ ಪುನೀತ್ ಏನಾಗಿರುತ್ತಾರೆ? ಈ ಚಿತ್ರವು ಪುನೀತ್ ಅಭಿಮಾನಿಗಳಿಗೂ ಇಷ್ಟವಾಗುತ್ತದಾ? ಮುಂತಾದ ಹಲವು ಪ್ರಶ್ನೆಗಳು ಕೇಳಿ ಬಂದಿದ್ದವು.
'ಗಂಧದ ಗುಡಿ' ಕಮರ್ಷಿಯಲ್ ಚಿತ್ರವಲ್ಲ. ಆದರೆ, ಪ್ರೇಕ್ಷಕರನ್ನು ಹಿಡಿದಿಡುವ, ನೋಡಿಸಿಕೊಂಡುವ ಎಲ್ಲ ಗುಣಗಳೂ ಇವೆ. ಇನ್ನು, ಇದನ್ನು ಸಾಕ್ಷ್ಯಚಿತ್ರ ಎನ್ನುವುದಕ್ಕಿಂತ ಸಾಕ್ಷ್ಯಕಥಾನಕ ಎಂದು ಹೇಳಬಹುದು. ಇಲ್ಲಿ ಪುನೀತ್, ಪುನೀತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಪ್ರಯಾಣ ಮಾಡಿದ್ದಾರೆ. ನಿಸರ್ಗ ರಮಣೀಯವಾದ ಸ್ಥಳಗಳನ್ನು ನೋಡಿ ತಾವು ಸವಿಯುವುದರ ಜತೆಗೆ, ಪ್ರೇಕ್ಷಕರಿಗೂ ನಮ್ಮ ನಿಸರ್ಗ ಸಂಪತ್ತನ್ನು ತೊರಿಸಿದ್ದಾರೆ. ಸಾಮಾನ್ಯವಾಗಿ, ಪುನೀತ್ ಚಿತ್ರಗಳೆಂದರೆ ಅವರು ವಿಜೃಂಭಿಸುತ್ತಿದ್ದರು. ಇಲ್ಲಿ 'ಗಂಧದ ಗುಡಿ'ಯನ್ನು ವಿಜೃಂಭಿಸಿದ್ದಾರೆ.
ವೈಲ್ಡ್ಲೈಪ್ ಫೋಟೋಗ್ರಫಿಯಲ್ಲಿ ದೊಡ್ಡ ಹೆಸರು ಮಾಡಿರುವ ಕನ್ನಡಿಗ ಅಮೋಘವರ್ಷ ಮತ್ತು ಪುನೀತ್ ರಾಜಕುಮಾರ್ ಇಬ್ಬರೂ ಒಂದು ಪ್ರಯಾಣ ಹೋಗುವ ಮೂಲಕ ಚಿತ್ರ ಶುರುವಾಗುತ್ತದೆ. ನಾಗರಹೊಳೆಯಿಂದ ಆರಂಭವಾಗಿ ಗಾಜನೂರು, ಬಿ.ಆರ್. ಹಿಲ್ಸ್, ನೇತ್ರಾಣಿ ದ್ವೀಪ, ವಿಜಯನಗರ, ಮಲೆನಾಡುಗಳನ್ನೆಲ್ಲ ಅಲೆದು ಕಾಳಿ ನದಿ ತಲುಪುತ್ತಾರೆ. ಕಾಳಿ ನದಿಯ ತೀರ್ಥೋದ್ಭವದ ಸಂದರ್ಭದಲ್ಲಿ ಚಿತ್ರ ಅಂತ್ಯವಾಗುತ್ತದೆ. ಈ ಮಧ್ಯೆ, ಕರುನಾಡಿನ ಅದ್ಭುತ ಕಾಡುಗಳನ್ನು, ಹಸುರಿನ ಬೀಡುಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಈ ಚಿತ್ರ ನೋಡಲೇಬೇಕು.
ಇಲ್ಲಿ ಬರೀ ಇಬ್ಬರೂ ಪ್ರಯಾಣ ಮಾಡುವುದಷ್ಟೇ ಅಲ್ಲ, ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತನಗೆ ಹಾವೆಂದರೆ ಎಷ್ಟು ಭಯ ಎಂದು ಪುನೀತ್ ಹೇಳಿಕೊಳ್ಳುವುದರ ಜತೆಗೆ, ಆನೆಗಳನ್ನು ಹೇಗೆ ಸೆರೆಹಿಡಿಯಲಾಗುತ್ತದೆ ಎಂದು ಅಮೋಘವರ್ಷ ನೆನಪಿಸಿಕೊಳ್ಳುತ್ತಾರೆ. ಪಕ್ಷಿಗಳು, ಕಪ್ಪೆಗಳು, ಚಿರತೆಗಳ ಬಗ್ಗೆ ಎಲ್ಲ ಮಾತನಾಡುತ್ತಾರೆ ಯಾವುದೋ ಕಾಡಲ್ಲಿ ಪ್ರಕೃತಿಯ ನಡುವೆ ನಿದ್ದೆ, ಫಾರೆಸ್ಟ್ ಗಾರ್ಡ್ಗಳ ಜತೆಗೆ ಊಟ, ಡಾ. ರಾಜಕುಮಾರ್ ಕುಳಿತು ಧ್ಯಾನ ಮಾಡುತ್ತಿದ್ದ ಜಾಗ, ಕಾಳಿನದಿಯಲ್ಲೊಂದು ಈಜು ... ಹೀಗೆ ಚಿತ್ರ ಮುಗಿಯುವುದೇ ಗೊತ್ತಾಗುವುದಿಲ್ಲ. ಇದೆಲ್ಲದರ ಜತೆಗೆ ಪುನೀತ್ ನಡೆದು ಬಂದ ಹಾದಿ, ಡಾ. ರಾಜಕುಮಾರ್ ಅವರ ಜೀವನ ... ಹೀಗೆ ಹಲವು ವಿಷಯಗಳು ಈ ಚಿತ್ರದಲ್ಲಿ ಅಡಕವಾಗಿವೆ.
ಪ್ರತೀಕ್ ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ ಜತೆಗೆ ಪುನೀತ್ ರಾಜಕುಮಾರ್ ಅವರ ಸಹಜ ನಡೆ-ನುಡಿ ಚಿತ್ರದ ಪ್ಲಸ್ಪಾಯಿಂಟ್ಗಳು. ಅಲ್ಲಲ್ಲಿ ಒನ್ಲೈನ್ರ್ಗಳನ್ನು ಹೇಳಿ ನಗಿಸುವ ಅವರು, ಹಾವನ್ನು ಕಂಡು ಭಯಪಡುತ್ತಾ, 'ಸದ್ಯ ಹುಷಾರಾಗಿ ಊರು ತಲುಪಿದರೆ ಸಾಕು. ಮೂರು ಪಿಕ್ಚರ್ ಒಪ್ಪಿಕೊಂಡಿದ್ದೀನಿ. ಹೆಂಡತಿ,-ಮಕ್ಕಳು ಮನೆಯಲ್ಲಿದ್ದಾರೆ' ಎಂದು ಹೇಳುವಾಗ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ.
'ಗಂಧದ ಗುಡಿ'ಯಂತಹ ಪ್ರಯೋಗ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೊಂಡು ಪ್ರೀತಿ, ಮುಗ್ಧತೆ, ಪ್ರಯೋಗಶೀಲತೆ, ಆಸಕ್ತಿ, ಸಾಹಸಪ್ರವೃತ್ತಿ ಎಲ್ಲವೂ ಬೇಕು. ಅದೆಲ್ಲವೂ ಪುನೀತ್ ಅವರಲ್ಲಿ ಇರುವುದರಿಂದಲೇ ಇಂಥದ್ದೊಂದು ಚಿತ್ರ ಸಾಧ್ಯವಾಗಿದೆ. ಇದೊಂದು ಬರೀ ಚಿತ್ರವಲ್ಲ, ಅನುಭವ. ಈ ಅನುಭವವನ್ನು ಸಕುಟುಂಬ ಸಮೇತರಾಗಿ ನಿಮ್ಮದಾಗಿಸಿಕೊಳ್ಳಿ.