

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾದ 'ಗಂಧದ ಗುಡಿ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅದ್ಭುತ ಸ್ಪಂದನೆ ಸಿಕ್ಕಿದೆ.
'ಗಂಧದ ಗುಡಿ' ಚಿತ್ರವು ಇಂದು ರಾಜ್ಯಾದ್ಯಂತ 223ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದೊಡ್ಡ ಬಿಡುಗಡೆ ಕಂಡಿದ್ದು, ಇಂದು ಬೆಳಿಗ್ಗೆಯಿಂದಲೇ ಚಿತ್ರವು ಹೌಸ್ಫುಲ್ ಆಗಿವೆ. ಬೆಂಗಳೂರಿನಲ್ಲೇ ನಿನ್ನೆಯಿಂದ ಹಲವು ಪ್ರೀಮಿಯರ್ ಶೋಗಳು ನಡೆದಿವೆ. ನಿನ್ನೆ ಒರಾಯನ್ ಮಾಲ್ನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಸುಧಾ ಮೂರ್ತಿ, ರಮ್ಯಾ, ರಕ್ಷಿತ್ ಶೆಟ್ಟಿ, ದೇವರಾಜ್, ರಿಷಭ್ ಶೆಟ್ಟಿ, ಗುರುಕಿರಣ್, ಅಜೇಯ್ ರಾವ್ ಸೇರಿದಂತೆ ಹಲವರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಇಂದು ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ 'ಗಂಧದ ಗುಡಿ' ಪ್ರದರ್ಶನ ಪ್ರಾರಂಭವಾಗಿದೆ. ಪುನೀತ್ ಅಭಿಮಾನಿಗಳಿಂದ ಪ್ರೇಕ್ಷಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಸಹ ಮಾಡಲಾಗಿತ್ತು.
'777 ಚಾರ್ಲಿ' ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಇಂದು ನರ್ತಕಿ ಚಿತ್ರಮಂದಿರದಲ್ಲಿ ಮೂರು ಬಾರಿ ಚಿತ್ರ ವೀಕ್ಷಿಸಿದ್ದಾರೆ. ಪುನೀತ್ ಅಭಿಮಾನಿಗಳ ಜತೆಗೆ ಸಿನಿಮಾ ವೀಕ್ಷಿಸಿ ಮಾತನಾಡಿದ ಅವರು, ''ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅವರನ್ನ ಮೀಟ್ ಮಾಡೋಕ್ಕೆ ಆಗಲಿಲ್ಲ. ಈ ಬಗ್ಗೆ ನನಗೆ ಬಹಳ ಬೇಸರವಿತ್ತು. ಮುಂದೊಂದು ಅವರನ್ನು ಭೇಟಿ ಮಾಡಬೇಕೆಂದುಕೊಂಡಿದ್ದು ಸಾಧ್ಯವಾಗಲೇ ಇಲ್ಲ' ಎಂದು ನೊಂದು ನುಡಿದರು.
ಇನ್ನು, ಈ ಚಿತ್ರವನ್ನು ಪುನೀತ್ ಕುಟುಂಬದವರು ಕಣ್ತುಂಬಿಕೊಂಡಿದ್ದಾರೆ. ಚಿತ್ರ ವೀಕ್ಷಿಸಿ ಮಾತನಾಡಿರುವ ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್, 'ಈ ಸಿನಿಮಾ ನೋಡಿದ ಮೇಲೆ ಪುನೀತ್ ಅಭಿನಯದ ಯಾವ ಸಿನಿಮಾಗಳು ನೆನೆಪು ಬರುತ್ತಿಲ್ಲ. ಮುಂಚೆ 'ಗಂಧದ ಗುಡಿ' ಅಂದರೆ ಡಾ. ರಾಜಕುಮಾರ್ ಚಿತ್ರ ಎನ್ನುತ್ತಿದ್ದರು. ಈಗ 'ಗಂಧದ ಗುಡಿ' ಎಂದರೆ ಪುನೀತ್ ಅನ್ನಬೇಕು ಎನ್ನುವ ರೀತಿಯಲ್ಲಿದೆ. ಈ ಸಿನಿಮಾ ನನ್ನ ತಮ್ಮನ ಜೊತೆ ಕಾಡಿಗೆ ಹೋಗಿ ಬಂದಂತಿದೆ. ಅವನು ರಾಜಕುಮಾರ್ ಮಗನಾಗಿ ಯಾಕೆ ಹುಟ್ಟಿದ ಅನ್ನೋದು ಗೊತ್ತಾಗಿದೆ. ಅವನು ಸಿನಿಮಾ ಮಾಡಲು ಭೂಮಿಗೆ ಬಂದಿಲ್ಲ. ಜನರಿಗೆ ಒಂದು ಸಂದೇಶ ನೀಡಲು ಬಂದಿದ್ದಾರೆ' ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.