

| ಮಂಜು ಕೊಟಗುಣಸಿ ಬೆಂಗಳೂರು
‘ಆತ್ಮತೃಪ್ತಿ ಎಂಬುದು ಎಲ್ಲರಿಗೂ ತುಂಬ ಮುಖ್ಯ. ಅದರಲ್ಲೂ ಸಿನಿಮಾ ಕಲಾವಿದರಿಗೆ ಅದು ಚೂರು ಹೆಚ್ಚೇ ಇರಬೇಕಾಗುತ್ತದೆ. ನಾವು ಮಾಡುವ ಪಾತ್ರ ಜನರಿಗೆ ಇಷ್ಟವಾಗುವುದಕ್ಕೂ ಮೊದಲು, ನನ್ನ ಆತ್ಮಕ್ಕೆ ಅದು ಒಪ್ಪಬೇಕು. ಆಗ ಮಾತ್ರ ಹೊಸತನ ಹೊಳೆಯಲು ಸಾಧ್ಯ’- ಹೀಗೆ ಒಂದೇ ಧಾಟಿಯಲ್ಲಿ ಹೇಳಿಕೊಂಡಿದ್ದು ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್.
ಇಂದು (ಫೆ. 18) ಗಾನವಿ ನಟನೆಯ ‘ಭಾವಚಿತ್ರ’ ತೆರೆಗೆ ಬರುತ್ತಿದೆ. ಹೊಸಬರ ಜತೆ ಸೇರಿ ಒಂದಷ್ಟು ಕನಸನ್ನು ಬಿತ್ತಿ, ಕೈಗೆಟುವ ಫಸಲು ತೆಗೆಯವ ಭರದಲ್ಲಿ ಅವರಿದ್ದಾರೆ. ಆ ಕನಸು ಮತ್ತು ಒಂದಷ್ಟು ಅನುಭವದ ಬಗ್ಗೆಯೂ ಮಾತನಾಡಿದ್ದಾರೆ.
‘ನಮ್ಮದು ಹೊಸ ತಂಡ. ಇದರಲ್ಲಿ ಕೆಲವೇ ಕೆಲವರಿಗೆ ಸಿನಿಮಾ ಬಗ್ಗೆ ಗೊತ್ತಿದೆ. ಪ್ರೇಕ್ಷಕ ಬಯಸುವ ಒಂದಷ್ಟು ಮನರಂಜನೆ ಜತೆಗೆ ಹೀಗೂ ಒಂದು ಸಿನಿಮಾ ಮಾಡಬಹುದೇ ಎಂಬ ಕಲ್ಪನೆಯಲ್ಲಿ ಚಿತ್ರ ಕಟ್ಟಿಕೊಟ್ಟಿದ್ದೇವೆ. ನನಗಿಲ್ಲಿ ಪ್ರಾಚ್ಯವಸ್ತು ಶಾಸ್ತ್ರಜ್ಞೆ ಪಾತ್ರ. ಇದರ ಜತೆಗೊಂದು ಪುನರ್ಜನ್ಮದ ಕಥೆಯೂ ಸಿನಿಮಾದಲ್ಲಿದೆ. ಅದಕ್ಕೆ ಹೇಳಿಮಾಡಿಸಿದ ಪಾತ್ರವೇ ನನಗಿಲ್ಲಿ ಸಿಕ್ಕಿದೆ. ಒಂದು ಕ್ಯಾಮರಾ ಮೇಲೆ ಇಡೀ ಸಿನಿಮಾ ಅವಲಂಬಿತವಾಗಿದೆ. ನಮ್ಮ ಕಾಣಿಗೆ ಕಾಣದ್ದು, ಕ್ಯಾಮರಾ ಕಣ್ಣಿಗೆ ಕಾಣಿಸುತ್ತಾ? ಇದು ಚಿತ್ರದ ಕಥೆ. ಅದರಾಚೆಗೆ ಇನ್ನೂ ಸಾಕಷ್ಟಿದೆ. ಅದನ್ನು ಸಿನಿಮಾದಲ್ಲಿಯೇ ನೋಡಿ’ ಎಂದು ಗೌಪ್ಯತೆ ಕಾಯ್ದುಕೊಳ್ಳುತ್ತಾರೆ ಗಾನವಿ.
ಪ್ರಬುದ್ಧತೆ ಮೂಡಿದ ಭಾವ: ‘ಮಗಳು ಜಾನಕಿ’ಯಿಂದ ಆರಂಭವಾದ ನನ್ನ ಈ ಪ್ರಯಾಣ, ಇದೀಗ ‘ವೇದ’ ಸಿನಿಮಾವರೆಗೂ ಒಂದು ನಿಂತಿದೆ. ಇಲ್ಲಿಯವರೆಗೂ ನಟಿಸಿದ ‘ಮಗಳು ಜಾನಕಿ’ ಧಾರಾವಾಹಿ, ‘ಹೀರೋ’ ಚಿತ್ರ, ‘ಗುಟ್ರುಗೋ’ ಕಿರುಚಿತ್ರ, ಇದೀಗ ‘ಭಾವಚಿತ್ರ’ ... ಎಲ್ಲದರಲ್ಲಿಯೂ ವಿಭಿನ್ನತೆ ಕಾಣಿಸುತ್ತಿದೆ. ಕಥೆ ಆಯ್ಕೆ ವಿಚಾರದಲ್ಲಿ ನನ್ನೊಳಗೆ ಪ್ರಬುದ್ಧತೆ ಮೂಡಿದ ಭಾವವಿದೆ. ಹೆಜ್ಜೆಹೆಜ್ಜೆಗೂ ಕಲಾವಿದೆಯಾಗಿ ಬೆಳವಣಿಗೆ ಕಾಣುತ್ತಿದ್ದೇನೆ ಎಂದೆನಿಸುತ್ತಿದೆ. ಇದು ಹೀಗೇ ಮುಂದುವರಿಯಲಿದೆ’ ಎಂಬುದು ಅವರ ಮಾತು.
‘ಹೊಸಬರ ಜತೆ ಸಿನಿಮಾ ಮಾಡುವುದೇ ಒಂದು ರೀತಿ ಖುಷಿ. ಅಲ್ಲಿ ಕಲಿಯುವುದಕ್ಕೆ ಸಿಗುವ ವಿಚಾರ ಒಂದೆರಡಲ್ಲ. ‘ಬಹುಕೃತ ವೇಷಂ’ ಸಿನಿಮಾದ ಕಥೆ ಕೇಳಿದಾಗ, ಒಂದೇ ಸಲಕ್ಕೆ ಒಪ್ಪಿಕೊಂಡೆ. ಹೀರೋ ಯಾರು, ನಿರ್ವಪಕರು ಯಾರು ಎಂಬುದನ್ನೂ ನಾನು ಕೇಳಲಿಲ್ಲ. ತಂಡದ ಮೇಲೆ ನನಗೆ ಅಷ್ಟೊಂದು ಆತ್ಮವಿಶ್ವಾಸವಿತ್ತು. ಇದೀಗ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಸಿನಿಮಾ ಮೂಡಿಬಂದಿದೆ. ಈವರೆಗೂ ಮಾಡಿರದ ಹೊಸ ರೀತಿಯ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ’ ಎಂದು ನಿರರ್ಗಳವಾಗಿ ಮಾತನಾಡುತ್ತಾರೆ ನಟಿ ವೈಷ್ಣವಿ ಗೌಡ.
ಹಾಗಾದರೆ ಏನಿದು ‘ಬಹುಕೃತ ವೇಷಂ’ ಎಂದರೆ, ‘ಗೊತ್ತಿದ್ದೋ ಗೊತ್ತಿಲ್ಲದೆಯೋ, ಬೇಕೋ ಬೇಡವೋ ಎಲ್ಲರೂ ಒಂದೊಂದು ವೇಷ ಹಾಕಿರುತ್ತೇವೆ. ನಮಗೆ ಅದು ಅವಶ್ಯಕತೆ ಇರಬಹುದು, ಇಲ್ಲದಿರಬಹುದು. ಈ ನಡುವೆ ನಾನಾ ರೀತಿ ಸಂದರ್ಭಗಳೂ ಪ್ರತಿಯೊಬ್ಬರ ಜೀವನದಲ್ಲಿ ಎದುರಾಗುತ್ತವೆ. ಆ ಸಂದರ್ಭಗಳಿಗೆ ಒಂದೊಂದು ರೀತಿ ವರ್ತಿಸುತ್ತೇವೆ. ಆ ವರ್ತನೆ ನಮ್ಮ ಜೀವನದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ, ಬೇರೆಯವರ ಜೀವನಕ್ಕೆ ಏನೆಲ್ಲ ಸಮಸ್ಯೆ ತಂದಿಡುತ್ತದೆ ಎಂಬುದೇ ಚಿತ್ರದ ಕಥೆ’ ಎನ್ನುತ್ತಾರೆ. ಮುಂದುವರಿದು ಈ ಚಿತ್ರದ ಮೂಲಧಾತು ಬಗ್ಗೆಯೂ ಹೇಳುತ್ತಾರೆ. ‘ಡೆಲಿರಿಯಂ ಎನ್ನುವ ಮನೋರೋಗವನ್ನೇ ಪ್ರಧಾನವಾಗಿರಿಸಿಕೊಂಡು ‘ಬಹುಕೃತ ವೇಷಂ’ ಚಿತ್ರ ಮೂಡಿಬಂದಿದೆ. ಈ ಚಿತ್ರದ ಕಥಾನಾಯಕನಿಗೆ ಡೆಲಿರಿಯಂ ಎಂಬ ವಿಚಿತ್ರ ಕಾಯಿಲೆ. ಹಿಂದೆ ಯಾರೋ ಇದ್ದಾರೆ, ಫಾಲೋ ಮಾಡುತ್ತಿದ್ದಾರೆ, ಏನೋ ಮಾಡಿಬಿಡುತ್ತಾರೆ ಎಂಬ ಭ್ರಮೆ. ಆ ಒಂದು ಎಳೆ ಮೇಲೆ ಇಡೀ ಸಿನಿಮಾ ನಿಂತಿದೆ. ನಾನಿಲ್ಲಿ ನಕ್ಷತ್ರ ಹೆಸರಿನ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೇ ಪಾತ್ರದ ಮೂಲಕ ಎಲ್ಲ ತರಹದ ಭಾವನೆಗಳನ್ನು ತೋರಿಸುವುದಕ್ಕೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ’ ಎಂದು ಚಿತ್ರದ ಎಳೆ ಬಿಚ್ಚಿಡುತ್ತಾರೆ.
ಸಿನಿಮಾ ಸೀರಿಯಲ್ ಎರಡರಲ್ಲೂ: ವೈಷ್ಣವಿ ಬಣ್ಣದ ಲೋಕಕ್ಕೆ ಬಂದು ಏನಿಲ್ಲ ಅಂದರೂ ಒಂದು ದಶಕ ಕಳೆಯಿತು. ಆರಂಭದಲ್ಲಿ ಒಂದಷ್ಟು ಧಾರಾ ವಾಹಿಯಲ್ಲಿ ನಟಿಸಿದರೂ, ಅವರಿಗೆ ಹೆಸರು ತಂದುಕೊಟ್ಟಿದ್ದು ‘ಅಗ್ನಿಸಾಕ್ಷಿ’. ಸುದೀರ್ಘ ಆರೂವರೆ ವರ್ಷ ಆ ಸೀರಿಯಲ್ನಲ್ಲಿ ಅಭಿನಯಿಸಿದ್ದಾರೆ ಅವರು. ಮುಂದೆಯೂ ಸಿನಿಮಾ ಮತ್ತು ಸೀರಿಯಲ್ನಲ್ಲಿ ಇರುವುದಾಗಿ ಹೇಳಿಕೊಳ್ಳುತ್ತಾರೆ. ‘ಕಿರುತೆರೆ ಕ್ಷೇತ್ರವೇ ನನಗೆ ಸ್ಪೆಷಲ್. ಹಾಗಾಗಿ, ಸಿನಿಮಾ ಅವಕಾಶಗಳ ಜತೆಗೆ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಬೇಕು ಅಂದುಕೊಂಡಿದ್ದೇನೆ. ಒಂದಷ್ಟು ಅವಕಾಶಗಳು ಬಂದಿವೆ. ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ ವೈಷ್ಣವಿ.