ಚಿರುವನ್ನು ನೆನೆದ ಮೇಘನಾ; ಗಜಾನನ ಆ್ಯಂಡ್​ ಗ್ಯಾಂಗ್ ಟ್ರೇಲರ್ ಬಿಡುಗಡೆ

Gang
Published on

ಬೆಂಗಳೂರು: ‘ನಮ್ ಗಣಿ ಬಿಕಾಂ ಪಾಸ್’ ನಂತರ ಆ ಚಿತ್ರದ ನಿರ್ದೇಶಕ ಅಭಿಷೇಕ್ ಶೆಟ್ಟಿ, ‘ಗಜಾನನ ಆ್ಯಂಡ್​ ಗ್ಯಾಂಗ್’ ಎಂಬ ಇನ್ನೊಂದು ಚಿತ್ರವನ್ನು ಪ್ರಾರಂಭಿಸಿದ್ದಾರೆ ಎಂಬ ಸುದ್ದಿಯೊಂದು ಕಳೆದ ವರ್ಷ ಬಂದಿತ್ತು. ಶ್ರೀಮಹಾದೇವ್ ಮತ್ತು ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ಆ ನಂತರ ಏನಾಯ್ತು ಗೊತ್ತಾಗಲಿಲ್ಲ. ಆ ಚಿತ್ರವನ್ನು ಸದ್ದಿಲ್ಲದೆ ಮುಗಿಸಿರುವ ಅಭಿಷೇಕ್, ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಚಿತ್ರದ ಟ್ರೇಲರ್ ನೋಡುತ್ತಿದ್ದರೆ ಚಿರು ಮತ್ತು ಅವರ ಸ್ನೇಹಿತರ ಗ್ಯಾಂಗ್ ನೆನಪಾಗುತ್ತದೆ ಎನ್ನುವ ಮೇಘನಾ ರಾಜ್, ‘ಇವರ ಜತೆ ಇದ್ದರೆ ನೀನು ಉದ್ಧಾರ ಆಗುವುದಿಲ್ಲ ಎಂದು ಚಿತ್ರದ ನಾಯಕಿ ಹೇಳುವಂತೆ ನಾನು ಸಹ ಚಿರುಗೆ ಹೇಳಿದ್ದೆ. ಕೊನೆಗೆ, ಈ ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಬಿಡಬೇಡ ಅಂತಲೂ ಹೇಳಿದ್ದೆ. ನಾನು ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಮುಖ್ಯ ಕಾರಣ ಮಹದೇವ್. ನಾವಿಬ್ಬರೂ ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದೆವು. ಅವರ ಸ್ನೇಹಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದೆ.

ಇನ್ನು, ಅದಿತಿ ನಮ್ಮ ತಾಯಿಯ ಮೆಚ್ಚಿನ ನಟಿ. ‘ರಂಗನಾಯಕಿ’ ಚಿತ್ರದಲ್ಲಿ ಅವರ ಅಭಿನಯ ನೋಡಿ ಅವರ ಬಗ್ಗೆ ಯಾವಾಗಲೂ ಒಳ್ಳೆಯ ಮಾತುಗಳನ್ನಾಡುತ್ತಿರುತ್ತಾರೆ. ಟ್ರೇಲರ್ ಬಹಳ ಚೆನ್ನಾಗಿ ಮೂಡಿ ಬಂದಿದ್ದು, ಸಿನಿಮಾ ಯಶಸ್ವಿಯಾಗಲಿ’ ಎಂದು ಹಾರೈಸಿದರು. ಗಜಾನನ ಎಂಬ ಯುವಕ ಮತ್ತು ಅವನ ಗೆಳೆಯರ ಗುಂಪಿನ ಕಥೆ ಇರುವ ಈ ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಉದಯ್ ಲೀಲಾ ಛಾಯಾಗ್ರಹಣ, ಪ್ರದ್ಯುತನ್ ಸಂಗೀತವಿರುವ ಈ ಚಿತ್ರವನ್ನು ನಾಗೇಶ್ ಕುಮಾರ್ ನಿರ್ವಿುಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net