ಗ್ಲಾಮರ್​​ನಿಂದ ಸನ್ಯಾಸತ್ವದ ಕಡೆಗೆ: ಒಂದು ಕಾಲದಲ್ಲಿ ಐಶ್ವರ್ಯಾ ರೈಗೆ ಟಕ್ಕರ್​ ಕೊಟ್ಟಿದ್ದ ಬ್ಯೂಟಿ ಇಂದು ಸನ್ಯಾಸಿನಿ! Barka Madan

Barka Madan
Published on

Barka Madan : ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ಈಕೆ ಒಂದು ಕಾಲದಲ್ಲಿ ಬಾಲಿವುಡ್​​ ಕ್ವೀನ್​ ಆಗಿದ್ದ ಕನ್ನಡತಿ ಐಶ್ವರ್ಯಾ ರೈಗೆ ಮಾತ್ರವಲ್ಲದೆ, 1994ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸುಷ್ಮಿತಾ ಸೇನ್ ಅವರಿಗೆ ಟಕ್ಕರ್ ಕೊಟ್ಟವಳು. ಯಶಸ್ವಿ ಸಿನಿಮಾಗಳಲ್ಲದೆ, ಟಿವಿ ಧಾರಾವಾಹಿನಿಗಳಲ್ಲಿಯೂ ಮಿಂಚಿದರು. ಅಷ್ಟೇ ಏಕೆ, ನಿರ್ಮಾಪಕಿಯಾಗಿಯೂ ಗಮನ ಸೆಳೆದಳು. ಅಂದಹಾಗೆ, ಆಕೆಯ ಹೆಸರು ಬರ್ಕಾ ಮದನ್.

ಮುಂದೊಂದು ದಿನ ಟಾಪ್ ನಟಿಯಾಗುವ ಭವಿಷ್ಯವಿದ್ದರೂ ಬಣ್ಣದ ಜಗತ್ತಿನ ನಡುವೆಯೇ ಶಾಂತಿಯ ಹುಡುಕಾಟ ಬಯಸಿ, ಸನ್ಯಾಸತ್ವ ಜೀವನ ಆಯ್ದುಕೊಂಡು, ಗ್ಲಾಮರಸ್​ ಲೋಕದಿಂದಲೇ ಕಣ್ಮರೆಯಾದರು. ಎಲ್ಲರು ಬಣ್ಣದ ಜಗತ್ತಿನ ಕಡೆಗೆ ಆಕರ್ಷಿತರಾಗುವಾಗ ಅದನ್ನು ತ್ಯಜಿಸಿ, ಆಧ್ಯಾತ್ಮವನ್ನು ಹುಡುಕಿ, ಅದನ್ನೇ ಜೀವನವನ್ನಾಗಿ ಮಾಡಿಕೊಂಡಿರುವ ನಟಿ ಬರ್ಕಾ ಮದನ್ ಅವರ ಬದುಕಿನ ಸಣ್ಣ ಪರಿಚಯವನ್ನು ನಾವಿಂದು ಮಾಡಿಕೊಳ್ಳೋಣ.

ಬರ್ಕಾ ಅವರು ಸಾಂಪ್ರದಾಯಿಕ ಹಾಗೂ ಪ್ರಗತಿಪರ ಕುಟುಂಬದಲ್ಲಿ ಜನಿಸಿದರು. ಅವರು ಚಿಕ್ಕ ವಯಸ್ಸಿನಿಂದಲೂ ಕಲೆ, ನೃತ್ಯ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತರ ಭಾರತದಲ್ಲಿ ಒಳ್ಳೆಯ ಹೆಸರು ಗಳಿಸಿದರು. ಅವರು ತಮ್ಮ ಸಂಪೂರ್ಣ ಶಿಕ್ಷಣವನ್ನು ಭಾರತದಲ್ಲಿಯೇ ಪೂರ್ಣಗೊಳಿಸಿದರು. ಹಾಗೆಯೇ, ಬಾಲಿವುಡ್ ಜಗತ್ತಿನಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಿದ ಬರ್ಕಾ ಮದನ್, ಇಂದು ಶಾಂತಿಯ ದಾರಿಯಲ್ಲಿ ಸಾಗುತ್ತಿರುವ ಸನ್ಯಾಸಿನಿಯಾಗಿ ಎಲ್ಲರಿಗೂ ಪ್ರೇರಣೆಯ ಉದಾಹರಣೆಯಾಗಿದ್ದಾರೆ. ಮೊದಲಿಗೆ ಮಾಡೆಲ್, ನಟಿ, ನಂತರ ಸನ್ಯಾಸಿನಿ ಎಂಬ ಪಯಣದಲ್ಲಿ ಅವರ ಜೀವನವೇ ಒಂದು ಚಿತ್ರಕಥೆಯಾಗಿದೆ ಎನ್ನಬಹುದು.

ಬರ್ಕಾ ಮದನ್ ಅವರು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ, ಬಳಿಕ ಹಲವಾರು ಚಲನಚಿತ್ರಗಳಲ್ಲಿ ನಟಿಸಿದರು. ಅವರಿಗೆ ಇದ್ದ ನಟನೆ ಹಾಗೂ ಗ್ಲಾಮರ್ ನೋಡಿದರೆ ಬಣ್ಣದ ಜಗತ್ತಿನಲ್ಲಿ ಬೆಳೆಯುವ ಎಲ್ಲ ಅವಕಾಶಗಳೂ ತೆರೆದುಕೊಂಡಿದ್ದವು. ಆದರೆ, ಬರ್ಕಾ ಅವರು ಕಲರ್​ಫುಲ್​ ಲೋಕದೊಳಗೆ ತಮ್ಮ ಅತ್ಮವನ್ನು ಹುಡುಕುತ್ತಿದ್ದರು.

ಬಾಲಿವುಡ್ ಸಾಧನೆ

1996 ರಲ್ಲಿ ಅಕ್ಷಯ ಕುಮಾರ್, ರೇಖಾ ಮತ್ತು ರವೀನಾ ಟಂಡನ್ ನಟಿಸಿ ಖೀಲಾಡಿಯೂ ಕಾ ಖಿಲಾಡಿ ಸಿನಿಮಾ ಬರ್ಕಾ ಅವರ ಚೊಚ್ಚಲ ಚಿತ್ರ. ಈ ಸಿನಿಮಾದಲ್ಲಿ ಬರ್ಕಾ ಅವರಿಗೆ ಹೆಚ್ಚಿನ ಮನ್ನಣೆ ಸಿಗದಿದ್ದರೂ ಅವರು ಸೌಂದರ್ಯ ಎಲ್ಲರ ಗಮನ ಸೆಳೆಯಿತು. 2003ರಲ್ಲಿ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮ ನಿರ್ದೇಶನದ ಹಾರರ್​ ಥ್ರಿಲ್ಲರ್​ ಸಿನಿಮಾ ಭೂತ್​ನಲ್ಲಿ ಮಂಜೀತ್​ ಖೋಸ್ಲಾ ಪಾತ್ರದಲ್ಲಿ ಬರ್ಕಾ ನಟಿಸಿದರು. ನಾಯಕಿಯನ್ನು ಕಾಡುವ ಪ್ರೇತದ ಪಾತ್ರವನ್ನು ಬರ್ಕಾ ನಿರ್ವಹಿಸಿದರು. ಈ ಒಂದು ಪಾತ್ರ ಅವರಿಗೆ ಉತ್ತಮ ಹೆಸರನ್ನು ತಂದುಕೊಟ್ಟಿತು.

ಟಿವಿ ಧಾರಾವಾಹಿಗಳಲ್ಲಿ ಸಾಧನೆ

ಕೇವಲ ಚಿತ್ರರಂದಲ್ಲಿ ಅಷ್ಟೇ ಅಲ್ಲದೆ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯಾಗಿ ಸ್ಥಿರವಾದ ಖ್ಯಾತಿಯನ್ನು ಗಳಿಸಿದರು. ಇವರು ನಟಿಸಿರುವ ಧಾರಾವಾಹಿಗಳೆಂದರೆ, 1857ರ ಕ್ರಾಂತಿ, ಸಾಸ್ ಬಹು ಔರ್ ಸೆನ್ಸೆಕ್ಸ್ ಮತ್ತು ಸಾತ್ ಫೇರೆ ಸಲೋನಿ ಕಾ ಸಫರ್ ಮುಂತಾದವು. ಬಣ್ಣದ ಜಗತ್ತಿನ ಯಶಸ್ಸು ಸಿಗುತ್ತಿದ್ದಂತೆ ಬರ್ಕಾ ಅವರು ಗೋಲ್ಡನ್​ ಗೇಟ್​ ಎಲ್​ಎಲ್​ಸಿ ಹೆಸರಿನಲ್ಲಿ ತಮ್ಮದೇ ಒಂದು ನಿರ್ಮಾಣ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಸ್ವತಂತ್ರವಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾದವರು. ಸೋಚ್​ ಲೋ ಮತ್ತು ಸುರ್ಖಾಬ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಆಧ್ಯಾತ್ಮದ ಕಡೆ ಪಯಣ

ಅಂದಹಾಗೆ, ಮದನ್ ಅವರು ನಟನೆ ಮತ್ತು ಮಾದಕ ಲೋಕವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಅಯ್ದುಕೊಂಡರು. ನಂತರ ಅವರು 2012 ರಲ್ಲಿ ಸನ್ಯಾಸಿಯಾಗಿ ಸನ್ಯಾಸವನ್ನು ಸ್ವೀಕರಿಸಿದರು. ಈಗ ಅವರು ಗೆಲಾಂಗ್ ತುಬ್ಟೆನ್ ಝಾಂಗ್ಮೋ ಎಂಬ ಧರ್ಮನಾಮದಿಂದ ಪರಿಚಿತರಾಗುತ್ತಿದ್ದಾರೆ. ಹಾಗೆಯೇ ಅವರು ನೇಪಾಳದ ಧರ್ಮಶಾಲಾದಲ್ಲಿ ತಪ್ಪಸ್ಸು ಮಾಡುತ್ತಾ, ಜಗತ್ತಿಗೆ ಶಾಂತಿ ಮ್ತತು ದಯ ಸಂದೇಶವನ್ನು ಸಾರುತ್ತಿದ್ದಾರೆ.

ಬೋಧನೆ

ಬರ್ಕಾ ಮದನ್ ಅವರ ಬದುಕು ನಮಗೆ ಹೇಳೋದು ಏನೆಂದರೆ ಯಶಸ್ಸು ಎಂಬುದು ಹಣ, ಹಿತ, ಹೆಸರಲ್ಲ, ಅದು ಆತ್ಮತೃಪ್ತಿ, ಶಾಂತಿ ಮತ್ತು ಧ್ಯಾನದಲ್ಲಿದೆ. ಹೊರಗಿನ ಲೋಕದ ಹೊಳಪು ಕಾಣುವ ಕಿರಣಗಳ ಹಿಂದೆ ಒಬ್ಬ ವ್ಯಕ್ತಿಯ ಅಂತಃಕರಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ ತಿಳಿದು ಬರುತ್ತದೆ.

ಜೀವನದ ಪಾಠ ಏನೆಂದರೆ, ಜೀವನದಲ್ಲಿ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಕು. ಸತ್ಯವನ್ನು ಹುಡುಕುವ ಪಯಣ ಯಾವತ್ತು ಜೀವನಕ್ಕೆ ದೀಪವಾಗಿ ನಡೆಯುತ್ತಿರಬೇಕು ಎಂಬುದು. ಬರ್ಕಾ ಮದನ್ ಅವರ ಬದುಕು, ನಮ್ಮೊಳಗಿನ ಶ್ರೇಷ್ಠತೆಯನ್ನು ಹುಡುಕಲು ಮಾರ್ಗದರ್ಶಿಯಾಗಿದೆ. ಜಗತ್ತನ್ನು ಅರಿಯುವ ಮುನ್ನ ನಿನ್ನೋಳಗ ನೀನು ಅರಿತು ನೋಡಣ್ಣ ಎಂಬ ಸಂದೇಶವನ್ನು ಸಾರುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net