

ಬೆಂಗಳೂರು: ಸಿನಿಮಾಗಳಲ್ಲಿ ಉದ್ದುದ್ದ ದೃಶ್ಯಗಳು ಹೊಸದೇನಲ್ಲ. ಈಗಾಗಲೇ ಹಲವು ಚಿತ್ರಗಳಲ್ಲಿ ಇಂಥ ಪ್ರಯೋಗಗಳನ್ನು ಮಾಡಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಧ್ರುವ ಅಭಿನಯದ ‘ಪೊಗರು’ ಚಿತ್ರದಲ್ಲಿ 10 ನಿಮಿಷದ ಒಂದೇ ದೃಶ್ಯವಿತ್ತು. ಈ ದೃಶ್ಯಕ್ಕಾಗಿ ಪುಟಗಟ್ಟಲೆ ಸಂಭಾಷಣೆಯನ್ನೂ ಬರೆಯಲಾಗಿತ್ತು ಮತ್ತು ಹಲವು ಕಲಾವಿದರು ನಟಿಸಿದ್ದರು. ಈ ಸಾಲಿಗೆ ‘ಬಹುಕೃತ ವೇಷಂ’ ಸಹ ಸೇರಿಕೊಂಡಿದೆ.
ಈ ಚಿತ್ರದ ಕ್ಲೈಮ್ಯಾಕ್ಸ್ನಲ್ಲೂ ನಾಲ್ಕೂವರೆ ನಿಮಿಷದ ದೃಶ್ಯವನ್ನು ಒಂದೇ ಟೇಕ್ನಲ್ಲಿ ಚಿತ್ರೀಕರಿಸಲಾಗಿದೆ. ‘ಅಗ್ನಿ ಸಾಕ್ಷಿ’ ಖ್ಯಾತಿಯ ವೈಷ್ಣವಿ, ‘ಗಿರ್ಗಿಟ್ಲೆ’ ನಂತರ ನಟಿಸಿರುವ ಚಿತ್ರವೇ ‘ಬಹುಕೃತ ವೇಷಂ’. ಈ ಚಿತ್ರದಲ್ಲಿ ಅವರಿಗೆ ‘ಗೌಡ್ರು ಸೈಕಲ್’ ಚಿತ್ರದ ಶಶಿಕಾಂತ್ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗಿದ್ದು, ಈ ಸಂದರ್ಭದಲ್ಲಿ ನಾಲ್ಕೂವರೆ ನಿಮಿಷಗಳ ಒಂದು ದೊಡ್ಡ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ.
‘ನಾಲ್ಕೂವರೆ ನಿಮಿಷಗಳ ಸಂಭಾಷಣೆ ಈ ದೃಶ್ಯದಲ್ಲಿದ್ದು, ಶಶಿಕಾಂತ್ ಹಾಗೂ ವೈಷ್ಣವಿ ಗೌಡ ಪೈಪೋಟಿ ಮೇಲೆ ಅಭಿನಯಿಸಿದ್ದಾರೆ’ ಎಂದು ನಿರ್ದೇಶಕ ಪ್ರಶಾಂತ್ ಕೆ ಎಳ್ಳಂಪಳ್ಳಿ ಅಭಿಪ್ರಾಯಪಟ್ಟಿದ್ದಾರೆ. ‘ಬಹುಕೃತ ವೇಷಂ’ ಚಿತ್ರವನ್ನು ನಿರ್ವಿುಸುತ್ತಿರುವವರು ಎಚ್. ನಂದ ಹಾಗೂ ಡಿ.ಕೆ. ರವಿ. ಅಧ್ಯಾಯ್ ರಾಜ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವೈಶಾಖ್ ವಿ ಭಾರ್ಗವ್ ಸಂಗೀತ ಸಂಯೋಜಿಸಿದ್ದಾರೆ.