ಪವನ್, ಟಿಡಿಪಿ VS ಜಗನ್: ಸಿಎಂ ಜಗನ್ ಎಂಥ ಉಗ್ರವಾದಿ ಗೊತ್ತಾ ಎಂದ ಚಂದ್ರಬಾಬು ನಾಯ್ಡು!

Published on
ಆಂಧ್ರ ಪ್ರದೇಶ: ತೆಲುಗಿನ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಅವರ ಸಿನಿಮಾ 'ಭೀಮ್ಲಾ ನಾಯಕ್' ಫೆಬ್ರವರಿ 25 ರಂದು ರಿಲೀಸ್ ಆಗಿದ್ದು, ಈ ಚಿತ್ರದ ಬಗ್ಗೆಯೇ ಎಲ್ಲೆಡೆ ಮಾತುಕತೆಯಾಗಿದೆ. ಹೌದು, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಅಮೇರಿಕಾದಲ್ಲಿ ಬರೋಬ್ಬರಿ 850k ಡಾಲರ್ ಅಂದರೆ ಸುಮಾರು 63.7 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದರೆ ನೀವು ನಂಬಲೇಬೇಕು. ಇನ್ನು, ತೆಲಂಗಾಣದಲ್ಲಂತೂ ಮೊದಲ ದಿನದ ಕಲೆಕ್ಷನ್ ಕೋಟಿ ಕೋಟಿ ಎನ್ನಲಾಗಿದೆ. ಇನ್ನು, ಸಿನಿಮಾ ರಿಲೀಸ್ ಆದ ಮೂರು ದಿನಗಳ ಬಳಿಕವೂ ಈ ಸಿನಿಮಾಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಕೋಟಿ ಕೋಟಿ ಗಳಿಸುತ್ತಿದೆ.
ಆದರೆ, ಎಲ್ಲರ ಕುತೂಹಲ, ಚಿತ್ತ ಮಾತ್ರ ಪವನ್ ಅವರ 'ಭೀಮ್ಲಾ ನಾಯಕ್' ಆಂಧ್ರ ಪ್ರದೇಶದಲ್ಲಿ ಎಷ್ಟು ಗಳಿಕೆ ಮಾಡಿದೆ ಹಾಗೂ ಸಿನಿಮಾಗೆ ಪ್ರತಿಕ್ರಿಯೆ ಹೇಗಿದೆ ಎಂಬುದರ ಮೇಲಿದೆ. ಇದಕ್ಕೆ, ಕಾರಣ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಪವನ್​ರ ನಡುವಿನ ರಾಜಕೀಯ ವೈಷಮ್ಯ, ಆಂಧ್ರದಲ್ಲಿ ಸಿನಿಮಾ ಟಿಕಿಟ್ ಬೆಲೆಯ ಮೇಲೆ ಹೊರಡಿಸಿರುವ ಹೊಸ ನಿಯಮಗಳು. ಮಾಹಿತಿಗಳ ಪ್ರಕಾರ, ಜಗನ್ ತಮ್ಮ ದ್ವೇಷ ಸಾಧಿಸಲು ಬರೋಬ್ಬರಿ ದಿನವೊಂದಕ್ಕೆ ಮೂರು ಕೋಟಿ ಖರ್ಚು ಮಾಡಿ 'ಭೀಮ್ಲಾ ನಾಯಕ್' ಸಿನಿಮಾ ಆಂಧ್ರದಲ್ಲಿ ಹಿಟ್ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ, 'ಭೀಮ್ಲಾ ನಾಯಕ್' ಚಿತ್ರಕ್ಕೆ ಮೊದಲ ದಿನವೇ ಆಂಧ್ರದಲ್ಲಿ ಬರೋಬ್ಬರಿ 10 ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ. 
ಹೌದು, ಇದನ್ನು ಗಮನಿಸುತ್ತಿರುವ ಹಲವರು ಜಗನ್ ಸರ್ಕಾರದ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ. ಪವನ್ ಸಿನಿಮಾಗೆ ತೊಂದರೆ ನೀಡುತ್ತಿರುವ ವಿರುದ್ಧ ಚಿತ್ರರಂಗದವರು ಸೇರಿದಂತೆ ವಿರೋಧ ಪಕ್ಷಗಳ ರಾಜಕಾರಣಿಗಳು ಜಗನ್ ಸರ್ಕಾರವನ್ನು ಟೀಕಿಸುತ್ತಿದ್ದು, ಕೆಲವರಂತೂ ಜಗನ್​ಗೆ ಪ್ರತಿದಿನ ಚಿಮಾರಿ ಹಾಕುತ್ತಿದ್ದಾರೆ. ಇದೀಗ, ಈ ಸಾಲಿಗೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕೂಡಾ ಸೇರಿಕೊಂಡಿದ್ದಾರೆ. 'ಭೀಮ್ಲಾ ನಾಯಕ್' ಚಿತ್ರವನ್ನು ಕುರಿತು ಸರಣಿ ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು ಅವರು, 'ರಾಜ್ಯದಲ್ಲಿ ಯಾವ ಸಂಸ್ಥೆಯನ್ನೂ, ರಂಗವನ್ನೂ ನೆಮ್ಮದಿಯಿಂದ ಉಳಿಯಲು ಬಿಡುವುದಿಲ್ಲ ಸಿಎಂ ಜಗನ್ ಮೋಹನ್ ರೆಡ್ಡಿ. ಈಗ, ಸಿನಿಮಾ ರಂಗವನ್ನು ಇವರು ಬಾಧಿಸುತ್ತಿದ್ದಾರೆ. 'ಭೀಮ್ಲಾ ನಾಯಕ್' ಚಿತ್ರದ ವಿಚಾರವಾಗಿ ಸಿಎಂ ಜಗನ್ ಅವರು ನಡೆದುಕೊಳ್ಳುತ್ತಿರುವ ರೀತಿ ಅವರು ಅದೆಷ್ಟು ಉಗ್ರವಾದಿ ಮನಸ್ಸನ್ನು ಹೊಂದಿದ್ದಾರೆ ಎಂಬುದನ್ನು ಎಲ್ಲರಿಗೂ ತೋರಿಸುತ್ತಿದೆ'' ಎಂದಿದ್ದಾರೆ ಮಾಜಿ ಸಿಎಂ.
''ಕೆಲವು ವ್ಯಕ್ತಿಗಳ ಮೇಲಿನ ದ್ವೇಷದಿಂದಾಗಿ ಒಂದು ಇಡೀ ವ್ಯವಸ್ಥೆಯನ್ನೇ ನಾಶ ಮಾಡಲು ಮಾಡುತ್ತಿರುವ ಜಗನ್ ಅವರ ಈ ಪ್ರಯತ್ನವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಜಗನ್ ಅವರ 'ಭಾರತಿ ಸಿಮೆಂಟ್‌' ಬೆಲೆಯ ಮೇಲೆ ಇರದ ನಿಯಂತ್ರಣ, ಸಿನಿಮಾಗಳ ಮೇಲೆ ಏಕೆ...? ಭಾರತದ ದೇಶದಲ್ಲಿ ಹಾಗೂ ವಿಶ್ವದಾದ್ಯಂತ ನಮ್ಮ ಟಾಲಿವುಡ್ ಬಹಳಷ್ಟು ಹೆಸರು ಮಾಡಿದೆ. ಅದನ್ನು ತುಳಿಯುವ ಮೂರ್ಖ ಪ್ರಯತ್ನವನ್ನು ಜಗನ್ ಈಗಲೇ ಕೈಬಿಡಬೇಕು''. ''ಮಾನ್ಯ ಸಿಎಂ ಜಗನ್ ಅವರು ರಾಜ್ಯದಲ್ಲಿನ ಎಲ್ಲಾ ಸಾರ್ವಜನಿಕ ಸಮಸ್ಯೆಗಳನ್ನು ಬದಿಗಿಟ್ಟು, ಕಂದಾಯ ನೌಕರರನ್ನು, ನಾಡಕಚೇರಿಗಳ ಬದಲಿಗೆ ಚಿತ್ರಮಂದಿರಗಳ ಬಳಿ ಕಾವಲು ಕಾಯಲು ಬಿಟ್ಟಿರುವುದು ಸರ್ಕಾರದ ತುಂಬಾ ಅರ್ಥಹೀನ ಕೆಲಸ ಎಂದರೇ ತಪ್ಪಾಗುವುದಿಲ್ಲ. ಇನ್ನು, ಉಕ್ರೇನ್‌ನಲ್ಲಿ ಸಿಲುಕಿರುವ ತಮ್ಮ ನಾಡಿನ ಜನರನ್ನು ರಕ್ಷಿಸಲು ದೇಶದ ಎಲ್ಲಾ ರಾಜ್ಯಗಳ ರಾಜಕಾರಣಿಗಳು ಪ್ರಯತ್ನಿಸುತ್ತಿದ್ದರೆ, ಮಾನ್ಯ ಆಂಧ್ರ ಪ್ರದೇಶದ ಸಿಎಂ ಮಾತ್ರ 'ಭೀಮ್ಲಾ ನಾಯಕ್' ಸಿನಿಮಾ ವಿರುದ್ಧ ದ್ವೇಷ ಸಾಧಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ. ಟಿಡಿಪಿ ಪಕ್ಷವು ನಿಮ್ಮ ತಪ್ಪನ್ನು ಪ್ರಶ್ನಿಸುತ್ತದೆ. 'ಭೀಮ್ಲಾ ನಾಯಕ್' ಸಿನಿಮಾಗೆ ನಿಮ್ಮ ಸರ್ಕಾರ ನೀಡುತ್ತಿರುವ ಕಿರುಕುಳವನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸುತ್ತೇನೆ'' ಎಂದು ಟ್ವೀಟ್​ಗಳನ್ನು ಮಾಡಿದ್ದಾರೆ ಚಂದ್ರಬಾಬು ನಾಯ್ಡು.
ಅಂದಹಾಗೆ, ಟಿಡಿಪಿ ಹಾಗೂ ನಟ ಪವನ್ ಕಲ್ಯಾಣ್​ಗೂ ಒಳ್ಳೆಯ ಸಂಬಂಧವೇನಿಲ್ಲ. ಟಿಡಿಪಿ ಹಾಗೂ ರಾಜಕಾರಣಿಯೂ ಆಗಿರುವ ನಟ ಪವನ್ ನಡುವಿನ ರಾಜಕೀಯ ವೈಷಮ್ಯದ ಬಗ್ಗೆ ಬಹುತೇಕ ಎಲ್ಲಿರಿಗೂ ಗೊತ್ತಿರುತ್ತೆ. ಆದರೆ, 'ಭೀಮ್ಲಾ ನಾಯಕ್' ಚಿತ್ರದ ವಿಚಾರದಲ್ಲಿ ಬಹುತೇಕ ಎಲ್ಲರ ಮನಸ್ಸು ಕರಗಿದೆ ಅನಿಸುತ್ತೆ. ಯಾಕೆಂದರೆ, ಜಗನ್ ಅವರು ನಟ ಪವನ್​ಗೆ ಕೊಡುತ್ತಿರುವ ಕಿರುಕುಳ ಅಂತಿಂಥದ್ದಲ್ಲ. ಈ ಹಿಂದೆ ರಿಲೀಸ್ ಆದ ಪವನ್ ಅವರ ಸಿನಿಮಾ 'ವಕೀಲ್ ಸಾಬ್'ಗೂ ಜಗನ್ ಸರ್ಕಾರ ಇದೇ ರೀತಿ ತೊಂದರೆ ನೀಡಿತ್ತು. ಆಂಧ್ರದಲ್ಲಿ ಈಗ ಸಿನಿಮಾ ವಿಷಯ ರಾಜಕೀಯ ವಿಷಯವಾಗಿ ಪರಿವರ್ತಿತಗೊಂಡಿದೆ. ''ಪವನ್ VS ಜಗನ್ ಸರ್ಕಾರ'' ಅನ್ನೋದು ಇದೀಗ ಆಂಧ್ರದಲ್ಲಿ ''ಪವನ್, ಟಿಡಿಪಿ, ಬಿಜೆಪಿ, ಟಾಲಿವುಡ್ VS ಜಗನ್ ಸರ್ಕಾರ'' ಆಗಿದೆ ಎಂದರೇ ತಪ್ಪಾಗುವುದಿಲ್ಲ. ಆದರೆ, ಇದೆಲ್ಲದರ ನಡುವೆ ಪವನ್ ಅಭಿಮಾನಿಗಳಿಗೆ ಮಾತ್ರ ತುಂಬಾನೇ ನಿರಾಸ ಎದುರಾಗುತ್ತಿದೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net