ಕರಣ್​ ಪಾರ್ಟಿಯಲ್ಲಿ ಡ್ರಗ್ಸ್​ ಬಳಕೆಯಾದ ಸಾಕ್ಷಿ ಇಲ್ಲ ಎಂದ ಫಾರೆನ್ಸಿಕ್​ ಲ್ಯಾಬ್​ ...

Karan Johar - Final
Published on

ಮುಂಬೈ: ಅಂತೂ ಕರಣ್​ ಜೋಹರ್​ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ವರ್ಷ ಕರಣ್​ ಜೋಹರ್​ ನೀಡಿದ ಪಾರ್ಟಿಯೊಂದರಲ್ಲಿ ಡ್ರಗ್ಸ್​ ಸರಬರಾಜಾಗಿತ್ತು ಮತ್ತು ಅದರಲ್ಲಿ ಭಾಗವಹಿಸಿದ್ದ ನಟ-ನಟಿಯರು ಡ್ರಗ್ಸ್​ ತೆಗೆದುಕೊಂಡಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಈ ವಿಷಯವಾಗಿ ತನಿಖೆ ನಡೆಸಿರುವ ಫಾರೆನ್ಸಿಕ್​ ಅಧಿಕಾರಿಗಳು, ಕರಣ್​ ಜೋಹರ್​ಗೆ ಕ್ಲೀನ್​ ಚಿಟ್​ ನೀಡಿದ್ದಾರೆ.

ಕರಣ್​ ಜೋಹರ್​, ಕಳೆದ ವರ್ಷದ ಜುಲೈನಲ್ಲಿ ಬಾಲಿವುಡ್​ ನಟ-ನಟಿಯರಿಗೆ ತಮ್ಮ ಮನೆಯಲ್ಲಿ ಪಾರ್ಟಿ ಕೊಟ್ಟಿದ್ದರು. ದೀಪಿಕಾ ಪಡುಕೋಣೆ, ಅರ್ಜುನ್​ ಕಪೂರ್​, ಮಲೈಕಾ ಅರೋರಾ, ವಿಕ್ಕಿ ಕೌಶಾಲ್​ ಸೇರಿದಂತೆ ಬಾಲಿವುಡ್​​ನ ಹಲವು ಜನಪ್ರಿಯ ನಟ-ನಟಿಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಯ ನಂತರ ಕರಣ್​ ಒಂದು ವಿಡಿಯೋ ಶೇರ್​ ಮಾಡಿದ್ದರು. ಈ ಪಾರ್ಟಿಯಲ್ಲಿದ್ದ ಹಲವರು ನಶೆಯಲ್ಲಿದ್ದಂತೆ ಕಂಡುಬಂದಿದ್ದರು. ಜತೆಗೆ ವಿಡಿಯೋದ ಕೆಲವು ತುಣುಕಗಳಲ್ಲಿ ಟೇಬಲ್​ ಮೇಲೆ ಬಿಳಿಗೆರೆಗಳು ಕಾಣಿಸುತ್ತಿದ್ದವು. ಇದನ್ನು ನೋಡಿದವರೆಲ್ಲರೂ ಇದೊಂದು ಡ್ರಗ್ಸ್​ ಪಾರ್ಟಿ ಎಂದಿದ್ದರು.

ಅದಕ್ಕೆ ಪ್ರತಿಯಾಗಿ, ಕಳೆದ ವರ್ಷವೇ ಕರಣ್ ಜೋಹರ್​ ಇದು ಡ್ರಗ್ಸ್​ ಪಾರ್ಟಿಯಲ್ಲ ಎಂದು ಸ್ಪಷ್ಟೇಕರಣ ಕೊಟ್ಟಿದ್ದರು. ಅಲ್ಲಿಗೆ ಪ್ರಕರಣ ತಣ್ಣಗಾಗಿತ್ತು. ಆದರೆ, ಈ ವರ್ಷ ಯಾವಾಗ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋದವರು ಯಾವಾಗ ಬಾಲಿವುಡ್​ ಮತ್ತು ಡ್ರಗ್ಸ್​ ಮಾಫಿಯಾದ ನಂಟು ಕೆದಕಿದರೋ, ಆಗ ಮತ್ತೆ ಈ ವಿಡಿಯೋ ವೈರಲ್​ ಆಯಿತು.

ಯಾವಾಗ ಈ ವಿಡಿಯೋ ವೈರಲ್​ ಆಯಿತೋ, ಆಗ ಈ ಪ್ರಕರಣವನ್ನು ಫಾರೆನ್ಸಿಕ್​ ಅಧಿಕಾರಿಗಳಿಗೆ ವಹಿಸಲಾಯಿತು. ಈ ಕುರಿತು ತನಿಖೆ ಮಾಡಿರುವ ಅಧಿಕಾರಿಗಳು, ಕರಣ್​ ಜೋಹರ್​ ಪಾರ್ಟಿಯಲ್ಲಿ ಡ್ರಗ್ಸ್​ ಬಳಕೆಯಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಗ್ಲಾಸ್​ ಟೇಬಲ್​ ಮೇಲಿದ್ದ ಬಿಳಿ ಗೆರೆಯು, ಕೇವಲ ಟ್ಯೂಬ್​ಲೈಟ್​ನ ಪ್ರತಿಫಲನ ಎಂದಿದ್ದಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಂದು ಪಾರ್ಟಿಯಲ್ಲಿ ಡ್ರಗ್ಸ್​​ ಬಳಕೆಯಾದ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಕರಣ್​ ಜೋಹರ್​ ಬಗ್ಗೆ ಇದುವರೆಗೂ ಎಲ್ಲರೂ ಅನುಮಾನದಿಂದಲೇ ನೋಡುತ್ತಿದ್ದರು. ಅವರ ಪಾರ್ಟಿಯಲ್ಲಿ ಡ್ರಗ್ಸ್​ ಬಳಕೆಯಾಗಿರಬಹುದಾ ಎಂಬ ಗುಮಾನಿ ಎಲ್ಲರಲ್ಲೂ ಇತ್ತು. ಆದರೆ, ಇದೀಗ ಫಾರೆನ್ಸಿಕ್​ ಅಧಿಕಾರಿಗಳೇ ಡ್ರಗ್ಸ್​ ಬಳಕೆಯಾಗಿಲ್ಲ ಎಂದು ಕ್ಲೀನ್​ ಚಿಟ್​ ಕೊಟ್ಟಿರುವುದರಿಂದ ನಿಟ್ಟುಸಿರುಬಿಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net