

Ramayana : ಬಾಲಿವುಡ್ನಲ್ಲಿ ಬಹು ವೆಚ್ಚದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ 'ರಾಮಾಯಣ' ಚಿತ್ರದ ಪಾತ್ರಗಳ ಹೆಸರುಗಳನ್ನು ಪರಿಚಯಿಸುವ ವಿಡಿಯೋವನ್ನು ಚಿತ್ರತಂಡ ಇಂದು (ಜುಲೈ 03) ಬಿಡುಗಡೆ ಮಾಡಿದೆ. ಈ ಮೆಗಾ ಯೋಜನೆಯಿಂದ ಬಿಡುಗಡೆಯಾದ ಮೊದಲ ವಿಡಿಯೋ ಇದಾಗಿದೆ.
ಅಂದಹಾಗೆ, ರಾಮಾಯಣವು ಮಾನವ ಸಮಾಜವನ್ನು ಪ್ರಭಾವಿಸಿದ ಒಂದು ಮಹಾನ್ ಮಹಾಕಾವ್ಯವಾಗಿದೆ. ರಾಮಾಯಣದಲ್ಲಿನ ಪ್ರತಿಯೊಂದು ಘಟನೆ, ಪ್ರತಿಯೊಂದು ಪಾತ್ರವು ಸಮಾಜ ಮತ್ತು ಮನುಷ್ಯರ ಕಡೆಗೆ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ರಾಮಾಯಣವು ಒಂದು ಸಿಹಿ ಕಥೆ. ನಾವು ರಾಮಾಯಣವನ್ನು ಎಷ್ಟೇ ಬಾರಿ ಓದಿದರೂ ಅಥವಾ ಕೇಳಿದರೂ ಅದು ಹೊಸದಾಗಿ ಭಾಸವಾಗುತ್ತದೆ. ಅದಕ್ಕಾಗಿಯೇ ಇದು ಈಗಾಗಲೇ ಬೆಳ್ಳಿ ಪರದೆಯ ಮೇಲೆ ಹಲವು ಬಾರಿ ಚಲನಚಿತ್ರವಾಗಿ ಮಿಂಚಿದೆ. ಈಗ ಮತ್ತೊಮ್ಮೆ 'ರಾಮಾಯಣ' ಹೆಸರಿನ ಚಿತ್ರವೊಂದು ಬಾಲಿವುಡ್‌ಗೆ ಅತಿ ದೊಡ್ಡ ಬಜೆಟ್‌ನ ಹೆಸರಿನೊಂದಿಗೆ ಬರುತ್ತಿದೆ.
ಇಂದು ಬಿಡುಗಡೆಯಾಗಿರುವ ಮೊದಲ ಗ್ಲಿಂಪ್ಸ್ನಲ್ಲಿ ರಾಮ ಮತ್ತು ರಾವಣನನ್ನು ಪರಿಚಯಿಸಲಾಗಿದೆ. ವಿಡಿಯೋದಲ್ಲಿ ಮೇಕಿಂಗ್ ತುಂಬಾ ರಿಚ್ ಆಗಿ ಕಾಣುತ್ತಿದೆ. ಕ್ವಾಲಿಟಿ ಅಂತೂ ಸಖತ್ ಆಗದೆ. ರಾಮನ ಪಾತ್ರಧಾರಿ ರಣಬೀರ್ ಅವರು ಬಾಣ ಬಿಡುವ ಒಂದು ಝಲಕ್ ತೋರಿಸಲಾಗಿದೆ. ರಾವಣ ಪಾತ್ರಧಾರಿ ಯಶ್ ಅವರ ಖಡಕ್ ವಿಲನ್ ಲುಕ್ ಅನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಗ್ಲಿಂಪ್ಸ್ನ ಅದ್ಧೂರಿತನ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ದಂಗಲ್ ಚಿತ್ರದ ಮೂಲಕ ವಿಶ್ವಾದ್ಯಂತ ಮನ್ನಣೆ ಗಳಿಸಿದ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ. ಕನ್ನಡದ ಸ್ಟಾರ್ ಹೀರೋ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರವಿ ದುಬೆ ಲಕ್ಷ್ಮಣನಾಗಿ ಮತ್ತು ಸನ್ನಿ ಡಿಯೋಲ್ ಆಂಜನೇಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗ್ಲಾಡಿಯೇಟರ್, ಇಂಟರ್ ಸ್ಟೆಲ್ಲರ್, ದಿ ಲಯನ್ ಕಿಂಗ್ ಮತ್ತು ಡ್ಯೂನ್ ನಂತಹ ಉನ್ನತ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ರಾಮಾಯಣ ಚಿತ್ರಕ್ಕೂ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ನಿರ್ಮಾಣ ಸಂಸ್ಥೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಅವರ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ರಾಮಾಯಣ-1 2026ರ ದೀಪಾವಳಿಯ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಭಾಗ-2 2027 ರ ದೀಪಾವಳಿಯಂದು ಬಿಡುಗಡೆಯಾಗಲಿದೆ ಎಂದು ತಯಾರಕರು ಘೋಷಿಸಿದ್ದಾರೆ. (ಏಜೆನ್ಸೀಸ್)