

‘ಎಲ್ಲ ತಾಯಂದಿರು, ಮಕ್ಕಳು ಮಿಸ್ ಮಾಡದೇ ನೋಡಬೇಕಾದ ಸಿನಿಮಾ ಇದು ...’- ‘ಮದಗಜ’ ಚಿತ್ರದ ಬಗ್ಗೆ ಶ್ರೀಮುರಳಿ ಇಷ್ಟು ಮಾತಾಡಿದ್ದೇ ಹೆಚ್ಚು ಎಂದರೆ ತಪ್ಪಿಲ್ಲ. ಏಕೆಂದರೆ, ಅದಕ್ಕೂ ಮುನ್ನ ಚಿತ್ರದ ಬಗ್ಗೆ, ಪಾತ್ರದ ಬಗ್ಗೆ ಎಷ್ಟೇ ಕೆದಕಿದರೂ, ಶ್ರೀಮುರಳಿ ಹೆಚ್ಚು ಮಾತನಾಡಲಿಲ್ಲ. ಈಗ ಏನೇ ಮಾತಾಡಿದರೂ ಹೆಚ್ಚಾಗಬಹುದು, ನೀವು ಚಿತ್ರ ನೋಡಿ, ಆಮೇಲೆ ಮಾತಾಡೋಣ ... ಹೀಗೆ ಮಾತು ತೇಲಿಸುತ್ತಲೇ ಇದ್ದರು. ಈ ಮೂಲಕ ಚಿತ್ರದಲ್ಲೇನಿರಬಹುದು ಎಂಬ ವಿಷಯವನ್ನು ಮುಚ್ಚಿಡುತ್ತಲೇ ಇದ್ದರು. ಒಂದು ಹಂತದಲ್ಲಿ, ‘ಎಲ್ಲ ತಾಯಂದಿರು, ಮಕ್ಕಳು ಮಿಸ್ ಮಾಡದೇ ನೋಡಬೇಕಾದ ಸಿನಿಮಾ ಇದು ...’ ಎಂದು ಹೇಳಿದರು.
ಈ ಚಿತ್ರ ತಾಯಂದಿರಿಗೆ ಯಾಕೆ ಇಷ್ಟ ಆಗುತ್ತದೆ, ಮಕ್ಕಳಿಗೆ ಯಾಕೆ ಆಗಬಹುದು ಎಂದು ಅವರು ಹೇಳಲಿಲ್ಲ. ‘ಅದನ್ನು ಚಿತ್ರಮಂದಿರದಲ್ಲೇ ನೋಡಿ, ಈಗ ಮಾತಾಡಿದರೆ ಬೇಗ ಆಗುತ್ತದೆ’ ಎಂದು ಸುಮ್ಮನಾದರು. ಇಷ್ಟೆಲ್ಲ ಆಗಿದ್ದು, ‘ಮದಗಜ’ ಚಿತ್ರದ ಬಿಡುಗಡೆಯ ಪತ್ರಿಕಾಗೋಷ್ಠಿ ಸಮಯದಲ್ಲಿ. ‘ಕಾಲಿಗೆ ಏಟು ಬಿದ್ದಾಗ, ನನ್ನಿಂದ ಚಿತ್ರೀಕರಣ ನಿಂತಿತು ಎಂಬ ಬೇಸರ ಇತ್ತು. ಹಾಗಾಗಿ, ಯಾವಾಗ ಎರಡನೇ ಲಾಕ್ಡೌನ್ ತೆರವಾಯಿತೋ, ಇನ್ನು ತಡ ಮಾಡಬಾರದು ಎಂದು ಚಿತ್ರೀಕರಣಕ್ಕೆ ನುಗ್ಗಿದೆವು. ಇಷ್ಟು ವರ್ಷಗಳಲ್ಲಿ ನಾನು ಯಾವತ್ತೂ ಆ ತರಹ ಚಿತ್ರೀಕರಣ ಮಾಡಿರಲಿಲ್ಲ. 26 ದಿನಗಳಲ್ಲಿ ಎರಡು ಫೈಟ್, ಎರಡು ಹಾಡು ಮತ್ತು ಹಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾಡಿದೆವು. ನಿರ್ಮಾಣ ಸಂಸ್ಥೆಯ ಮತ್ತು ಚಿತ್ರತಂಡದ ಸಹಕಾರವಿಲ್ಲದಿದ್ದರೆ, ಅದು ಖಂಡಿತ ಸಾಧ್ಯವಾಗುತ್ತಿರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಮುರಳಿ. ಇದೊಂದು ಒಳ್ಳೆಯ ಕನ್ನಡ ಚಿತ್ರ ಎನ್ನುವ ಶ್ರೀಮುರಳಿ, ‘ಒಂದೊಳ್ಳೆಯ ತಂಡದಿಂದಾಗಿ ಈ ಚಿತ್ರ ಸಾಧ್ಯವಾಗಿದೆ. ನಿರ್ವಪಕ ಉಮಾಪತಿ ಯಾವತ್ತೂ ಚಿತ್ರಕ್ಕೆ ಕಡಿಮೆ ಮಾಡಲಿಲ್ಲ. ದೊಡ್ಡ ತಾರಾಗಣದ ಚಿತ್ರ ಮಾಡಿದ್ದಾರೆ. ಪ್ರತೀ ದಿನ ಕಲಿಯುವುದಕ್ಕೆ ಸಾಕಷ್ಟು ವಿಷಯ ಸಿಗುತ್ತಿತ್ತು. ಚಿತ್ರದಲ್ಲಿ ಹಲವು ಹೈಲೈಟುಗಳಿವೆ. ಮೊದಲು ಚಿತ್ರ ನೋಡಿ. ಆ ನಂತರ ಮಾತಾಡೋಣ’ ಎಂದು ಪುನಃ ಅಲ್ಲಿಗೇ ವಾಪಸಾದರು.
ನಾಳೆಯ ಬಗ್ಗೆ ನಂಬಿಕೆ ಇಲ್ಲ: ಪುನೀತ್ ನಿಧನದ ನಂತರ ಪ್ಲಾನ್ ಮಾಡುವುದನ್ನೇ ಬಿಟ್ಟುಬಿಟ್ಟೆ ಎನ್ನುತ್ತಾರೆ ಶ್ರೀಮುರಳಿ. ‘ಒಂದು ತಿಂಗಳವರೆಗೂ ಭವಿಷ್ಯದ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಿದ್ದೆ. ಆದರೆ, ಈಗ ನಾಳೆ ಬಗ್ಗೆ ಯೋಚಿಸುವುದಿಲ್ಲ. ಈಗ ಖುಷಿಯಾಗಿದ್ದೇನಾ ಎನ್ನುವುದಷ್ಟೇ ಯೋಚಿಸುತ್ತೇನೆ. ನಾವಿಬ್ಬರೂ ಹಿಂದಿನ ದಿನ ಸಿಕ್ಕಿದ್ದೆವು. ಒಟ್ಟಿಗೆ ಜಿಮ್ ಮಾಡಿದ್ದೆವು. ಹಲವು ವಿಷಯಗಳ ಬಗ್ಗೆ ಮಾತಾಡಿದ್ದೆವು. ಅದಾಗಿ 24 ಗಂಟೆಗಳಿಗೆ ಅಪ್ಪು ಮಾಮ ಇಲ್ಲ ಎಂದರೆ ಏನು ಹೇಳೋದು. ಈಗಲೂ ಅದರಿಂದ ಹೊರಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೋಗುವ ವಯಸ್ಸಾ ಅವರದ್ದು? ಅಷ್ಟೊಂದು ದಾನ-ಧರ್ಮ ಮಾಡಿದರು. ಕೇಳಿದ ದೇವಸ್ಥಾನಕ್ಕೆ ದುಡ್ಡು ಕೊಡೋರು. ಅಷ್ಟೆಲ್ಲಾ ಮಾಡಿದರೂ ಅಂತಹ ಒಳ್ಳೆಯ ವ್ಯಕ್ತಿ ಹೋದರು ಎಂದರೆ ಏನರ್ಥ? ನಾಳೆಯ ಬಗ್ಗೆ ನಂಬಿಕೆ ಹೊರಟು ಹೋಗಿದೆ’ ಎಂದು ಭಾವುಕರಾಗುತ್ತಾರೆ ಶ್ರೀಮುರಳಿ.