

ಬೆಂಗಳೂರು: 'ನಾನು ಅವನಲ್ಲ, ಅವಳು' ಚಿತ್ರವೇ ಕೊನೆ. ಈ ಏಳು ವರ್ಷಗಳಲ್ಲಿ ಬಿ.ಎಸ್. ಲಿಂಗದೇವರು ನಿರ್ದೇಶನದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. 'ಆಧುನಿಕ ಬಸವಣ್ಣ' ಎಂದೇ ಖ್ಯಾತರಾಗಿರುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನವನ್ನಾಧರಿಸಿ ಅವರು 'ವಿರಾಟಪುರ ವಿರಾಗಿ' ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ ಆ ಚಿತ್ರ ಸದ್ದಿಲ್ಲದೆ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಮೊದಲ ನೋಟ ಬಿಡುಗಡೆಯಾಯಿತು.
ಗಾಂಧಿ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು ಹಾವೇರಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಶಿವಮೊಗ್ಗ, ಕರ್ನಾಟಕ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಚಿತ್ರದ ಕುರಿತು ಮಾತನಾಡಿದ ಲಿಂಗದೇವರು, 'ಎರಡೂವರೆ ವರ್ಷಗಳ ಹಿಂದೆ ಜಡೆಯ ಮಹಾಸ್ವಾಮಿಗಳು ನನಗೆ ಹಾನಗಲ್ ಕುಮಾರ ಶಿವಯೋಗಿಗಳ ಕುರಿತು ಸಿನಿಮಾ ಮಾಡಲು ಹೇಳಿದರು. ಆನಂತರ ನನ್ನ ಆಪ್ತರ ಬಳಿ ಈ ವಿಷಯವನ್ನು ಸಮಾಲೋಚನೆ ಮಾಡಿದೆ. ಅವರೆಲ್ಲರೂ ನೀವು ಈ ಚಿತ್ರವನ್ನು ನಿರ್ದೇಶನ ಮಾಡಿ ಎಂದು ಧೈರ್ಯ ತುಂಬಿದರು. ನಾನು ನಿರ್ದೇಶನಕ್ಕೆ ಮುಂದಾದೆ. ಅನೇಕ ಮಠಾಧೀಶರನ್ನು ಹಾಗೂ ವಿದ್ವಾಂಸರನ್ನು ಸಂಪರ್ಕಿಸಿ ಸ್ಕ್ರಿಪ್ಟ್ ಸಿದ್ದ ಮಾಡಿದೆ. 'ಸಮಧಾನ' ತಂಡದಿಂದ ಚಿತ್ರ ನಿರ್ಮಾಣವಾಗಿದೆ' ಎಂದು ಮಾಹಿತಿ ಕೊಟ್ಟರು ಲಿಂಗದೇವರು.
'ಕುಮಾರ ಶಿವಯೋಗಿಗಳ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಆಭಿನಯಿಸಿದ್ದಾರೆ. 'ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಹರಿಕಾರರಾದ ಕುಮಾರ ಶಿವಯೋಗಿಗಳ ಜೀವನಾಧಾರಿತ ಈ ಚಿತ್ರದ ಮೊದಲ ನೋಟ ಪರಮಪೂಜ್ಯರ ಹಾಗೂ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಗಿರುವುದು ತುಂಬಾ ಸಂತೋಷವಾಗಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನ, ಅಶೋಕ್ ವಿ ರಾಮನ್ ಛಾಯಾಗ್ರಹಣ ಈ ಚಿತ್ರಕ್ಕಿದೆ' ಎಂದು ಹೇಳಿದರು.
'100 ವರ್ಷಗಳ ಹಿಂದೆ ಸಮಾಜ ಈ ರೀತಿ ಇರಲಿಲ್ಲ. ಅಂತಹ ಸಮಯದಲ್ಲಿ ಅನೇಕ ಸುಧಾರಣೆಗೆ ಮುಂದಾದ, ಆಧುನಿಕ ಬಸವಣ್ಣ ಎಂದೇ ಎಲ್ಲರಿಂದಲೂ ಕರೆಯಲ್ಪಡುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕು. ಲಿಂಗದೇವರು ನಿರ್ದೇಶನದ ಈ ಚಿತ್ರ ಜನವರಿ 12ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ರಾಜ್ಯದ ಐದು ಕಡೆಗಳಿಂದ ರಥಯಾತ್ರೆ ನಡೆಯಲಿದೆ' ಎಂದು ಜಡೆ ಅಮರೇಶ್ವರ ಶ್ರೀಗಳು ತಿಳಿಸಿದರು.