ಪೂಜಾ ಹುಟ್ಟುಹಬ್ಬಕ್ಕೆ 'ರಾಧೆ ಶ್ಯಾಮ್​' ಚಿತ್ರದ ಫಸ್ಟ್​ಲುಕ್​

Pooja Hegde - Final
Published on

ಮುಂಬೈ: ಪೂಜಾ ಹೆಗ್ಡೆ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದವರು, ಬಂಧು-ಮಿತ್ರರು ಈ ಸಂದರ್ಭದಲ್ಲಿ ಪೂಜಾಗೆ ಹಲವು ಗಿಫ್ಟ್​ಗಳನ್ನು ಕೊಟ್ಟಿರಬಹುದು. ಆದರೆ, 'ರಾಧೆ ಶ್ಯಾಮ್​' ಚಿತ್ರತಂಡದವರು ಪೂಜಾಗೆ ಒಂದು ಪೋಸ್ಟರ್​ ಗಿಫ್ಟ್​ ಕೊಟ್ಟಿದ್ದಾರೆ.

'ರಾಧೆ ಶ್ಯಾಮ್​', ಪೂಜಾ ಅಭಿನಯದ ಹೊಸ ಚಿತ್ರ. ಈ ಚಿತ್ರದಲ್ಲಿ ಅವರು ಪ್ರಭಾಸ್​ಗೆ ನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ರೆಟ್ರೋ ಚಿತ್ರವಾಗಿದ್ದು, 70-80ರ ದಶಕದಲ್ಲಿ ನಡೆಯುವ ಕಥೆ ಈ ಚಿತ್ರದ್ದಾಗಿದೆ ಎಂದು ಹೇಳಲಾಗುತ್ತಿದೆ.

ಪೂಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್​ನಲ್ಲಿ ಪೂಜಾ ರೈಲಿನಲ್ಲಿ ಕುಳಿತುಕೊಂಡಿರುವ ದೃಶ್ಯವನ್ನು ನೋಡಬಹುದಾಗಿದೆ. ಈ ಪೋಸ್ಟರ್​ನಲ್ಲಿ ಪೂಜಾ ಅವರದ್ದು ರೆಟ್ರೋ ಲುಕ್​ ಆಗಿದ್ದು, ಅವರ ಸ್ಕಾರ್ಫ್​ ಮತ್ತು ಡ್ರೆಸ್​ ಗಮನಸೆಳೆಯುತ್ತಿದೆ. ಇನ್ನು ಚಿತ್ರದಲ್ಲಿ ಅವರ ಹೆಸರು ಪ್ರೇರಣಾ ಎಂದಾಗಿದ್ದು, ಹ್ಯಾಪಿ ಬರ್ಥ್​ಡೇ ಪ್ರೇರಣಾ ಎಂದು ಚಿತ್ರತಂಡದವರು ಪೂಜಾಗೆ ಶುಭ ಹಾರೈಸಿದ್ದಾರೆ.

'ರಾಧೆ ಶ್ಯಾಮ್​' ಚಿತ್ರವನ್ನು ರಾಧಾಕೃಷ್ಣ ಅವರು ನಿರ್ದೇಶಿಸಿದ್ದು, ಯುವಿ ಕ್ರಿಯೇಷನ್ಸ್​ ಬ್ಯಾನರ್​ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರವು ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net