ಐಶ್ವರ್ಯಾ ಲುಕ್ ಸೋರಿಕೆ; ಪೊನ್ನಿಯನ್ ಸೇಲ್ವನ್​ನಲ್ಲಿ ಮಂದಾಕಿನಿ ದೇವಿ

Aish
Published on

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೇಲ್ವನ್’ ಸಿನಿಮಾ ತಂಡ ಮಧ್ಯ ಪ್ರದೇಶದಲ್ಲಿ ಬೀಡು ಬಿಟ್ಟು, ಕೆಲ ದಿನಗಳಿಂದ ಸತತ ಶೂಟಿಂಗ್ ಮಾಡುತ್ತಿದೆ. ಇದೀಗ ಶೂಟಿಂಗ್ ಸೆಟ್​ನಿಂದ ಚಿತ್ರದ ನಾಯಕಿ ಐಶ್ವರ್ಯಾ ರೈ ಅವರ ಲುಕ್ ಸೋರಿಕೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಘೋಷಣೆ ಆದಾಗಿನಿಂದ ಐಶ್ವರ್ಯಾ ಲುಕ್ ಬಗ್ಗೆ ಚಿತ್ರತಂಡ ಗೌಪ್ಯತೆ ಕಾಯ್ದುಕೊಂಡೇ ಬಂದಿತ್ತು. ಸಣ್ಣ ಸುಳಿವನ್ನೂ ನೀಡಿರಲಿಲ್ಲ. ಇದೀಗ ಸೋರಿಕೆ ಆಗಿರುವ ಫೋಟೋ ಹಲವು ಪ್ರಶ್ನೆ ಮತ್ತು ಕುತೂಹಲಗಳಿಗೆ ಉತ್ತರವಾಗಿದೆ.

‘ಪೊನ್ನಿಯನ್ ಸೇಲ್ವನ್’ ಸಿನಿಮಾದಲ್ಲಿ ಐಶ್ವರ್ಯಾಗೆ ಎರಡು ಶೇಡ್​ಗಳಿವೆ ಎಂಬುದು ಈ ಹಿಂದೆಯೇ ಸುದ್ದಿಯಾಗಿತ್ತು. ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಮಂದಾಕಿನಿ ದೇವಿಯ ಅವತಾರದ ಫೋಟೋ ಹೊರಬಿದ್ದಿದೆ. ಚಿನ್ನಾಭರಣ ತೊಟ್ಟು ರಾಣಿಯ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಂದಹಾಗೆ, ಚೋಳರ ಯುಗದ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದ್ದು, ಬಹುತಾರಾಗಣವೇ ಚಿತ್ರದಲ್ಲಿದೆ. ಚಿಯಾನ್ ವಿಕ್ರಮ್ ತ್ರಿಷಾ, ಜಯಂ ರವಿ, ಕಾರ್ತಿ, ಶರತ್ ಕುಮಾರ್, ಪ್ರಕಾಶ್ ರೈ ಸೇರಿ ಹಲವರು ಚಿತ್ರದ ಭಾಗವಾಗಿದ್ದಾರೆ. ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net