

ಮುಂಬೈ: ಆರು ತಿಂಗಳುಗಳಿಂದ ಕರೊನಾ ಮತ್ತು ಲಾಕ್ಡೌನ್ನಿಂದ ಸ್ಥಬ್ಧವಾಗಿದ್ದ ಬಾಲಿವುಡ್ ಇದೀಗ ಗರಿಗೆದರಿದೆ. ಕರೊನಾ ಭಯದಿಂದ ಚಿತ್ರೀಕರಣಕ್ಕೆ ಹೋಗುವುದೋ ಬೇಡವೋ ಎಂದು ಹೆದರಿದ್ದ ಸ್ಟಾರ್ನಟರೆಲ್ಲರೂ ಚಿತ್ರೀಕರಣ ಪ್ರಾರಂಭಿಸಿರುವುದಷ್ಟೇ ಅಲ್ಲ, ಕೆಲವರು ಅರ್ಧಂಬರ್ಧ ಆಗಿದ್ದ ಚಿತ್ರಗಳನ್ನು ಸಹ ಮುಗಿಸಿದ್ದಾರೆ.
ಈ ಪೈಕಿ ಮೊದಲು ಹೆಜ್ಜೆ ಇಟ್ಟವರು ಅಕ್ಷಯ್ ಕುಮಾರ್. ಆಗಸ್ಟ್ವರೆಗೂ ಮನೆಯಲ್ಲೇ ಇದ್ದ ಅವರು, ಆಗಸ್ಟ್ 10ರಂದು 'ಬೆಲ್ ಬಾಟಮ್' ಚಿತ್ರದ ಚಿತ್ರೀಕರಣಕ್ಕೆ ಸ್ಕಾಟ್ಲ್ಯಾಂಡ್ಗೆಂದು ಹೊರಟರು. ಸತತ 50 ದಿನಗಳ ಕಾಲ ಅಲ್ಲಿ ಚಿತ್ರೀಕರಣ ಮುಗಿಸಿರುವುದಷ್ಟೇ ಅಲ್ಲ, ಏಪ್ರಿಲ್ 02ಕ್ಕೆ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಘೋಷಿಸಿದ್ದಾರೆ.
ಅಕ್ಷಯ್ ಕುಮಾರ್ ಅಲ್ಲದೆ ಸಲ್ಮಾನ್ ಖಾನ್, ಆಮೀರ್ ಖಾನ್, ಕಂಗನಾ ರಣಾವತ್, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಶಿಲ್ಪಾ ಶೆಟ್ಟಿ, ಸಂಜಯ್ ದತ್, ಕರೀನಾ ಕಪೂರ್ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. 'ತಲೈವಿ' ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಕಂಗನಾ ರಣಾವತ್ ಭಾಗವಹಿಸಿದ್ದು, ತಮ್ಮ ಭಾಗದ ಬಹುತೇಕ ಕೆಲಸವನ್ನು ಮುಗಿಸಿದ್ದಾರೆ.
ಈ ಪೈಕಿ ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಅವರು 'ಲಾಲ್ ಸಿಂಗ್ ಚಡ್ಢಾ' ಚಿತ್ರೀಕರಣದಲ್ಲಿ ಭಾಗವಹಿಸಿದರೆ, ಅರ್ಜುನ್ ಕಪೂರ್ ಹೆಸರಿಡದ ಚಿತ್ರದಲ್ಲಿ, ಶಿಲ್ಪಾ ಶೆಟ್ಟಿ 'ಹಂಗಾಮ 2'ನಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಎಲ್ಲ ಥಿಯೇಟರ್ ಆರಂಭ ಡೌಟ್
ಸಲ್ಮಾನ್ ಖಾನ್ ಅವರು 'ರಾಧೆ' ಚಿತ್ರದ ಚಿತ್ರೀಕರಣ ಮುಗಿಸಿದರೆ, 'ಶಂಶೇರಾ' ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಸಂಜತ್ ದತ್ ಮುಗಿಸಿದ್ದಾರೆ. ಇನ್ನು ಇವರೆಲ್ಲರ ಜತೆಗೆ ಅಕ್ಷಯ್ ಕುಮಾರ್, 'ಪೃಥ್ವಿರಾಜ್' ಚಿತ್ರದ ಎರಡನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ಲಾಕ್ಡೌನ್ ನಂತರ ಬಾಲಿವುಡ್ ಗರಿಗೆದರಿದ್ದು, ಹೊಸ ಚಿತ್ರಗಳ ಬಿಡುಗಡೆ ಇಲ್ಲದಿದ್ದರೂ, ಒಂದಿಷ್ಟು ಚಿತ್ರಗಳ ಚಿತ್ರೀಕರಣ ಕೆಲಸಗಳು ಸಾಂಗವಾಗಿ ನೆರವೇರುತ್ತಿವೆ.