ಅರ್ಜುನ ಒಬ್ಬ ಮುಖ ಹಲವು; ವಿಜಯವಾಣಿ ಸಿನಿಮಾ ವಿಮರ್ಶೆ

Arjun Gowda
Published on
  • ಚಿತ್ರ: ಅರ್ಜುನ್ ಗೌಡ
  • ನಿರ್ದೇಶನ: ಶಂಕರ್
  • ನಿರ್ಮಾಣ: ರಾಮು
  • ತಾರಾಗಣ: ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್, ‘ಸ್ಪರ್ಶ’ ರೇಖಾ, ರಾಹುಲ್ ದೇವ್ ಮುಂತಾದವರು

| ಚೇತನ್ ನಾಡಿಗೇರ್

ತಾಯಿಗೆ ಆದರ್ಶಗಳು ಮುಖ್ಯ. ಮಗನಿಗೆ ಪ್ರೀತಿ ಮುಖ್ಯ. ಈ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಇಬ್ಬರೂ ದೂರಾಗುತ್ತಾರೆ. ದೂರಾಗುವ ಮುನ್ನ, ‘ನೀನು ನನ್ನ ವಿಷಯಕ್ಕೆ ಬಂದರೆ ನಿನ್ನ ಸಾಯಿಸಿಬಿಡ್ತೀನಿ ...’ ಎಂದು ಮಗ ಅವಾಜ್ ಹಾಕಿಯೇ ಹೋಗಿರುತ್ತಾನೆ. ಅದೊಂದು ಕೆಟ್ಟ ಘಳಿಗೆಯಲ್ಲಿ ಅವಳೆದುರು ಅವನು ಗನ್ ಹಿಡಿದು ನಿಲ್ಲಬೇಕಾಗುತ್ತದೆ. ಅವನ ಗನ್​ನಿಂದ ಹಾರುವ ಬುಲೆಟ್, ತಾಯಿ ಸಾವಿನ ಬಾಗಿಲು ತಟ್ಟುವಂತೆ ಮಾಡುತ್ತದೆ. ಮಗ ತನ್ನ ಸ್ವಂತ ತಾಯಿಯನ್ನು ಕೊಲ್ಲುವುದಕ್ಕೆ ಸಾಧ್ಯವಾ?

‘ಅರ್ಜುನ್ ಗೌಡ’ ಮೇಲ್ನೋಟಕ್ಕೆ ಒಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಂಡರೂ, ಇಲ್ಲಿ ತಾಯಿ-ಮಗನ ಸೆಂಟಿಮೆಂಟ್ ಇದೆ. ಒಂದು ಪ್ರೇಮಕಥೆ ಇದೆ. ವಿರಹ ವೇದನೆ, ಕಾಮಿಡಿ, ಭಯೋತ್ಪಾದನೆ ಎಲ್ಲವೂ ಇದೆ. ಇವೆಲ್ಲವನ್ನೂ ಸೇರಿಸಿ ಚಿತ್ರ ಮಾಡಿದ್ದಾರೆ ಶಂಕರ್. ಒಂದು ಕಮರ್ಷಿಯಲ್ ಚಿತ್ರ ಹೇಗಿರಬೇಕು, ಅದರಲ್ಲೂ ಮಾಸ್ ಪ್ರಿಯರಿಗೆ ಏನೆಲ್ಲ ಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಹಾಗಾಗಿ, ಆ ಲೆಕ್ಕಾಚಾರದಲ್ಲೇ ಅವರು ಚಿತ್ರ ಮಾಡಿದ್ದಾರೆ. ತಾಯಿಗೆ ಮಗ ಗುಂಡು ಹಾರಿಸುವ ದೃಶ್ಯದಿಂದ ಚಿತ್ರ ಪ್ರಾರಂಭವಾಗುತ್ತದೆ. ಒಂದು ಕುತೂಹಲದ ಅಂಶದಿಂದ ಪ್ರಾರಂಭವಾಗುವ ಚಿತ್ರವನ್ನು ಆ ನಂತರ ನಿರ್ದೇಶಕರು ಫ್ಲಾಶ್​ಬ್ಯಾಕ್​ನಲ್ಲಿ ಹೇಳುತ್ತಾ ಹೋಗುತ್ತಾರೆ. ಪ್ರೀತಿ, ಸೆಂಟಿಮೆಂಟ್, ಕಾಮಿಡಿ, ಆಕ್ಷನ್ ... ಹೀಗೆ ಒಂದರಹಿಂದೊಂದು ದೃಶ್ಯಗಳನ್ನು ಪೋಣಿಸುತ್ತಾ ಹೋಗುತ್ತಾರೆ. ಮಧ್ಯಂತರದವರೆಗೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಒಂಚೂರು ಯಶಸ್ವಿಯೂ ಆಗುತ್ತಾರೆ. ಆ ನಂತರದ್ದೇ ಸಮಸ್ಯೆ. ಇದೇ ಮಾದರಿ ಮುಂದುವರಿಸಬೇಕು ಎಂಬ ನಿಟ್ಟಿನಲ್ಲಿ ಬೇಡದ ಕಾಮಿಡಿ ಸೇರಿಸುತ್ತಾರೆ. ಬೇಡದಿದ್ದರೂ ಒಂದು ಎಣ್ಣೆ ಹಾಡನ್ನು ಎಳೆದು ತರುತ್ತಾರೆ. ಭಯೋತ್ಪಾದನೆಯನ್ನು ಮಟ್ಟಹಾಕಬೇಕೆಂಬ ತಾಯಿಯ ಆಶಯವನ್ನು ಮಗ ನಿಜ ಮಾಡಿ ತೋರಿಸುವ ಮೂಲಕ ಚಿತ್ರ ಮುಗಿಸುತ್ತಾರೆ. ಆರಂಭದಲ್ಲಿ ತಾವೇ ಇಟ್ಟ ಚುಕ್ಕೆಗಳನ್ನು ಕೊನೆಗೆ ಕೂಡಿಸುವಲ್ಲಿ ಅವರು ಸುಸ್ತಾಗುತ್ತಾರೆ.

ಈ ತರಹದ ಚಿತ್ರಗಳು ಪ್ರಜ್ವಲ್​ಗೆ ಹೊಸದಲ್ಲ. ಹಾಗಾಗಿ, ಬಹಳ ಸಲೀಸಾಗಿ ಈ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ತಾಯಿ ಪಾತ್ರದಲ್ಲಿ ‘ಸ್ಪರ್ಶ’ ರೇಖಾ ಇಷ್ಟವಾಗುತ್ತಾರೆ. ಪ್ರಿಯಾಂಕಾಗೆ ಹೆಚ್ಚು ಕೆಲಸವಿಲ್ಲ. ಸಾಧು ನಗಿಸಬೇಕು ಎಂದರೂ ಕಾಮಿಡಿ ದೃಶ್ಯಗಳಲ್ಲಿ ಧಮ್ ಇಲ್ಲ. ಒಂದೊಂದು ದೃಶ್ಯ ಸಹ ಬಹಳ ರಿಚ್ ಆಗಿ ಮೂಡಿಬಂದಿವೆ. ರಾಮು ನಿರ್ವಣದ ಚಿತ್ರವಾಗಿರುವುದರಿಂದ ಅದ್ಧೂರಿತನ ಸಹಜವೇ. ಇದರಲ್ಲಿ ಛಾಯಾಗ್ರಾಹಕ ಜೈಆನಂದ್ ಕೈವಾಡವೂ ಇದೆ. ಹೊಡೆದಾಟ, ಹಿಂಸೆ ಅತಿಯಾದರೂ ಫೈಟ್​ಗಳು ಮತ್ತು ಚೇಸ್​ಗಳನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಇನ್ನು, ಡ್ರೋನ್ ಶಾಟ್​ಗಳು ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net