

ಅಪ್ಪ ಅಂದರೆ ಬೆನ್ನೆಲುಬು, ಅಪ್ಪ ಅಂದರೆ ಆಸರೆ, ಅಪ್ಪ ಅಂದರೆ ಆಕಾಶ ... ಅಪ್ಪನ ಬಗ್ಗೆ ಹೇಳಹೊರಟರೆ ಅದು ಮುಗಿಯದ ಪುಸ್ತಕ. ವಿಶ್ವಾಸದ ಸೆಳೆತ, ಧೈರ್ಯದ ಕೀಲಿಕೈ, ಸಹನೆಯ ಕಟ್ಟೆ, ಭದ್ರತೆಯ ಬಿಸಿಯುಸಿರು. ಹೀಗೆ ಪದಪುಂಜಗಳಿಂದ ಪೋಣಿಸಲಾಗದಷ್ಟು ಭಾವನೆಗಳನ್ನು ಹೊತ್ತು ಮನೆ ಮುನ್ನಡೆಸುವ ಅಪ್ಪನ ದಿನದ ಸಂದರ್ಭದಲ್ಲಿ ವಿಜಯವಾಣಿ ಜತೆ ಮಾತನಾಡಿದ್ದಾರೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು.
ಮಾನಸಿಕವಾಗಿ ಜತೆಗಿದ್ದಾರೆ: ಅಪ್ಪ ಇಲ್ಲ ಅಂದರೆ ಅದು ದೇಹದ ಒಂದು ಅಂಗವನ್ನೇ ಕಳೆದು ಕೊಂಡಂತೆ. ಚಿರು ಸಾವಿನ ದೃಶ್ಯಾವಳಿಗಳನ್ನು ಟಿವಿಯಲ್ಲಿ ನೋಡುತ್ತಿದ್ದಾಗಲೇ ನನ್ನ ಅಪ್ಪನ ಸಾವು ಮತ್ತೆ ಕಣ್ಣ ಮುಂದೆ ಬಂದು ನಿಂತಿತ್ತು. ಆವತ್ತಿನ ಸ್ಥಿತಿ ನನ್ನ ಪಾಲಿನ ಅತ್ಯಂತ ದುಃಖದ ಗಳಿಗೆಯಾಗಿತ್ತು. ಆದರೆ, ದೈಹಿಕವಾಗಿ ಅವರು ನಮ್ಮ ಜತೆಗಿಲ್ಲ ಅಷ್ಟೇ. ಮಾನಸಿಕವಾಗಿ ಸದಾ ನನ್ನೊಳಗೆ ನೆಲೆಸಿದ್ದಾರೆ. ನನ್ನ ಪ್ರತಿ ಕೆಲಸಕ್ಕೂ ಅವರ ಆಶೀರ್ವಾದ ಸಿಗುತ್ತದೆ. ಸ್ಪೂರ್ತಿಯ ರೂಪದಲ್ಲಿ ಸದಾ ನನ್ನೊಂದಿಗಿರುತ್ತಾರೆ. ಅಷ್ಟಕ್ಕೂ ಅಪ್ಪ ಅನ್ನೋ ಪದ ತುಂಬ ಚಿಕ್ಕದು. ಆದರೆ, ಆ ಪದದ ಶಕ್ತಿ ಅಪಾರ. ಅಪ್ಪನ ಜತೆ ಹಠ ಮಾಡ್ತಿವಿ, ಜಗಳ ಮಾಡ್ತಿವಿ. ಅದೆಲ್ಲವನ್ನು ಆನಂದಿಸುತ್ತಲೇ, ತಾನು, ತನ್ನ ಕುಟುಂಬ ಎಂದು ಎಷ್ಟೋ ತ್ಯಾಗಕ್ಕೆ ಮುಂದಾಗುತ್ತಾನೆ. ಇಡೀ ಮನೆಯ ಜವಾಬ್ದಾರಿ ಹೊತ್ತಿರುತ್ತಾನೆ. ಹಾಗಾಗಿ ಯಾವುದನ್ನೂ ಅಷ್ಟು ಸುಲಭವಾಗಿ ತೆಗೆದುಕೊಳ್ಳಬೇಡಿ ಎನ್ನುತ್ತಾರೆ ಹರ್ಷಿಕಾ ಉದಪಂಡ ಪೂಣಚ್ಚ.
ಹಸಿ ಗಾಯದಂತಿದೆ...:
ನನ್ನ ಬೆನ್ನೆಲುಬು...: ಚಿಕ್ಕಂದಿನಲ್ಲಿ ಫಾದರ್ಸ್ ಡೇ ಆಚರಣೆ ಬಗ್ಗೆ ಗೊತ್ತಿರಲಿಲ್ಲ. ಮದರ್ಸ್ ಡೇ ಬಗ್ಗೆ ಅಷ್ಟೇ ಗೊತ್ತಿತ್ತು. ಪಾಕೆಟ್ ಮನಿಗೆಂದು ಕೊಟ್ಟಿದ್ದ ಹಣದಿಂದ ಅಮ್ಮನಿಗೆ ಏನಾದರೂ ಗಿಫ್ಟ್ ಕೊಡುತ್ತಿದ್ದೆ. ಆದರೆ, ಅಪ್ಪನಿಗೆ ಏನನ್ನೂ ಕೊಟ್ಟಿರಲಿಲ್ಲ. ತಿಳಿವಳಿಕೆ ಬಂದ ಬಳಿಕ ಅಪ್ಪನಿಗೆ ವಾಚ್ ಕೊಡಿಸಿದ್ದೆ. ಆದರೆ, ಇದೀಗ ಅಪ್ಪನಿಗಾಗಿ ಏನೂ ಮಾಡಲಿಲ್ಲವಲ್ಲ ಎಂಬುದು ತುಂಬ ಕಾಡುತ್ತಿದೆ. ಪ್ರತಿ ಹೆಣ್ಣುಮಕ್ಕಳ ಜೀವನದಲ್ಲಿ ಅವರ ತಂದೆಯೇ ಮೊದಲ ಹೀರೋ. ನನ್ನ ಪಾಲಿಗಂತೂ ದೊಡ್ಡ ಸಪೋರ್ಟ್ ಸಿಸ್ಟಮ್ ಆಗಿದ್ದರು. ‘ನನ್ ಮಗಳು ಏನಾದರೂ ಸಾಧಿಸ್ತಾಳೆ ಬಿಡು ...’ ಎಂದು ಪ್ರತಿ ಕ್ಷಣ ಧೈರ್ಯ ತುಂಬುತ್ತಿದ್ದರು. ಸದಾ ಮುನ್ನಾ , ಚಿನ್ನ ಎಂದೇ ಕರೆಯುತ್ತಿದ್ದರು. ಇದೀಗ ಹಾಗೆ ಕರೆಯುವವರೂ ಯಾರೂ ಇಲ್ಲ. ಒಬ್ಬಂಟಿ ಎಂಬ ಫೀಲ್ ಆಗುತ್ತಿದೆ. ಇದ್ದಾಗ ಅಪ್ಪನ ಮೌಲ್ಯ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವುದು ತೇಜಸ್ವಿನಿ ಪ್ರಕಾಶ್ ಮನದಾಳ.
ವಿಚಾರಗಳೇ ಬಳುವಳಿ...: ಅಪ್ಪ ನನ್ನ ಪಾಲಿನ ಸ್ಪೂರ್ತಿ. ಚಿಕ್ಕಂದಿನಲ್ಲಿ ಅವರೊಂದಿಗೆ ನೂರಾರು ಸಿನಿಮಾಗಳನ್ನು ನೋಡಿದ್ದೆ. ರಾಜಕುಮಾರ್, ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ಕ್ಲಾಸಿಕ್ ಸಿನಿಮಾಗಳನ್ನು ತೋರಿಸುತ್ತಿದ್ದರು. ಆವತ್ತು ಅಪ್ಪ ಸಿನಿಮಾ ತೋರಿಸಿದ್ದಕ್ಕೇ ನಾನಿವತ್ತು ಸಿನಿಮಾಕ್ಷೇತ್ರದಲ್ಲಿದ್ದೇನೆ. ಆದರೆ, ಅದೆಲ್ಲವನ್ನು ನೋಡಲು ಅಪ್ಪ ಇಲ್ಲ. ನನಗೆ ಬುದ್ಧಿ ಬಂದ ಮೇಲೆ ತಂದೆ ದೂರವಾದರು. ಆದರೆ, ಆ ಕಿರು ಅವಧಿಯಲ್ಲಿಯೇ ನಾನು ಅಪ್ಪನನ್ನು ಹೆಚ್ಚು ಅರಿತಿದ್ದೆ. ನಿಜಕ್ಕೂ ಹೆಮ್ಮೆ ಅನಿಸುತ್ತದೆ. ಅವರು ಬರೆಯುತ್ತಿದ್ದ ಕವಿತೆಗಳು, ನನ್ನ ಭಾಷಣ ಸ್ಪರ್ಧೆಗೆ ಅವರು ಬರೆದುಕೊಡುತ್ತಿದ್ದ ಬರಹ, ಅವರ ಶಬ್ಧ ಭಂಡಾರ ಇಂದಿಗೂ ಖುಷಿಕೊಡುತ್ತದೆ. ಶಾಲೆಗೆ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದದ್ದು ಈಗಲೂ ನನಗೆ ನೆನಪಿದೆ. ಅವರು ಕಲಿಸಿಕೊಟ್ಟ ಜೀವನ ಇಂದಿಗೂ ಕೈ ಹಿಡಿದು ನಡೆಸುತ್ತಿದೆ. ಅವರಿಂದ ಸಾಕಷ್ಟು ವಿಚಾರಗಳು ನನಗೆ ಬಳುವಳಿಯಾಗಿ ಸಿಕ್ಕಿವೆ. ಮೊದಲನೆಯದು ಅವರದೇ ರೂಪ ನನಗೆ ಸಿಕ್ಕಿದೆ. ನೀರಿನಲ್ಲಿ ಕಾಲಿಟ್ಟು ಮನೆಯಲ್ಲಿ ಓಡಾಡಿದರೆ, ಅಪ್ಪನೇ ಓಡಾಡಿದ ರೀತಿ ಕಾಣಿಸುತ್ತೆ ಎಂದು ಅಮ್ಮ ಹೇಳಿದ್ದುಂಟು. ಆದರೆ, ಬೇಸರದ ಸಂಗತಿ ಎಂದರೆ, ಅಪ್ಪನ ಜತೆಗಿನ ಫೋಟೋಗಳ ಕೊರತೆ ನನಗೆ ಕಾಡುತ್ತಿದೆ. ಹಳೆಯ ಫೋಟೋಗಳಷ್ಟೇ ಉಳಿದಿವೆ. ಅವುಗಳಿಗೆ ಇದೀಗ ಆಧುನಿಕ ಸ್ಪರ್ಶ ಕೊಡಬೇಕೆಂದುಕೊಂಡಿದ್ದೇನೆ ಎನ್ನುವುದು ಮಾನ್ವಿತಾ ಹರೀಶ್ ಕಾಮತ್ ಅಭಿಮತ.