ಚಿರಂಜೀವಿ ಕರೊನಾ ಗೆದ್ದು ಬರಲಿ: ದೇವಸ್ಥಾನ ಸುತ್ತುತ್ತಿರುವ ಅಭಿಮಾನಿ ಬಳಗ

Chiranjeevi-ians
Published on

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಅವರ ಅಭಿಮಾನಿ ವಲಯ ಕೊಂಚ ಆತಂಕಕ್ಕೊಳಗಾಗಿದೆ. ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತು ನೆಚ್ಚಿನ ನಟನ ಚೇತರಿಕೆಗಾಗಿ ಮೊರೆಯಿಡುತ್ತಿದ್ದಾರೆ.

ಹೈದರಾಬಾದ್​ನಲ್ಲಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುತ್ತಿರುವ ಅಭಿಮಾನಿಗಳು ಬೇಗ ಹುಷಾರಾಗಿ ಎಂದು ದೇವರ ಬಳಿ ಕೋರಿದ್ದಾರೆ. ಗುಂಟೂರು, ಕೃಷ್ಣ, ವೆಸ್ಟ್ ಗೋದಾವರಿ ಸೇರಿ ಹಲವು ಜಿಲ್ಲೆಯಲ್ಲಿನ ಅಭಿಮಾನಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

”ಆಚಾರ್ಯ” ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಕರೊನಾ ಪರೀಕ್ಷೆಗೆ ಚಿರಂಜೀವಿ ಒಳಗಾಗಿದ್ದರು. ಪ್ರೋಟೋಕಾಲ್ ನಂತೆ ಚಿತ್ರತಂಡ ಕರೊನಾ ಟೆಸ್ಟ್ ಮಾಡಿಸಿತ್ತು. ವರದಿಯಲ್ಲಿ ಚಿರುಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಚಾರ್ಯ ಸಿನಿಮಾ ಶೂಟಿಂಗ್​ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ತಮಗೆ ಕರೊನಾ ಸೋಂಕು ಇರುವ ಬಗ್ಗೆ ಸ್ವತಃ ಚಿರಂಜೀವಿ ಅವರೇ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘5 ದಿನಗಳಿಂದ ಯಾರೆಲ್ಲ ನನ್ನ ಸಂಪರ್ಕಕ್ಕೆ ಬಂದಿದ್ದೀರೋ ದಯವಿಟ್ಟು ಅವರೆಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ಆರೋಗ್ಯದತ್ತ ಜಾಗ್ರತೆ ವಹಿಸಿ’ ಎಂದು ಮನವಿ ಮಾಡಿದ್ದಾರೆ. ಸದ್ಯ ಚಿರಂಜೀವಿ ಹೋಮ್ ಕ್ವಾರೆಂಟೈನ್​ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net