ಖ್ಯಾತ ಮೇಕಪ್ ಆರ್ಟಿಸ್ಟ್, LGBTQ ಹೋರಾಟಗಾರ ಮ್ಯಾಡ್ ಸಂಧು ಮೇಲೆ ಗುಂಡಿನ ದಾಳಿ: ಆಸ್ಪತ್ರೆ ತಲುಪುವ ಮುನ್ನವೇ ಸಾವನ್ನಪ್ಪಿದ ಇನ್ಫ್ಲುಯೆನ್ಸರ್! Mad Sandhu Killed

ಅಮೃತಸರದಲ್ಲಿ ಖ್ಯಾತ ಮೇಕಪ್ ಆರ್ಟಿಸ್ಟ್ ಹಾಗೂ LGBTQ ಇನ್ಫ್ಲುಯೆನ್ಸರ್ ಮ್ಯಾಡ್ ಸಂಧು ಮೇಲೆ ಗುಂಡಿನ ದಾಳಿ ನಡೆದಿದ್ದು, ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
Mad Sandhu killed in the shooting incident in Amritsar.
ಅಮೃತಸರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಮ್ಯಾಡ್ ಸಂಧು
Published on: 

ಅಮೃತಸರ: ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದ, ತಮ್ಮ ಬೋಲ್ಡ್ ಹಾಗೂ ಡಿಫರೆಂಟ್ ಲುಕ್‌ಗಳಿಂದಲೇ ಲಕ್ಷಾಂತರ ಯುವಕರ ಮನಗೆದ್ದಿದ್ದ ಖ್ಯಾತ ಮೇಕಪ್ ಆರ್ಟಿಸ್ಟ್ ಹಾಗೂ ಇನ್ಫ್ಲುಯೆನ್ಸರ್ ಮ್ಯಾಡ್ ಸಂಧು (Mad Sandhu) ಮೇಲೆ ಅಮೃತಸರದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಈ ಆಘಾತಕಾರಿ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸಂಧು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಸ್ಪಷ್ಟನೆ ಹೊರಬೀಳಬೇಕಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಇನ್ಫ್ಲುಯೆನ್ಸರ್!

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳ ಪ್ರಕಾರ, ಗುಂಡಿನ ದಾಳಿಯ ನಂತರ ಮ್ಯಾಡ್ ಸಂಧು ರಸ್ತೆಯಲ್ಲಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಸಲಿಂಗಕಾಮಿ ನಿಂದನೆ ಎದುರಿಸಿದರೂ ಧೈರ್ಯಗೆಡದ ದಿಟ್ಟೆ!

ಮ್ಯಾಡ್ ಸಂಧು ಎಂದಿಗೂ ಯಾವುದಕ್ಕೂ ಹೆದರಿ ಬದುಕಿದವರಲ್ಲ. ತಮ್ಮದೇ ಆದ ವಿಶಿಷ್ಟ ಫ್ಯಾಷನ್ ಹಾಗೂ ಮೇಕಪ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇನ್‌ಸ್ಟಾಗ್ರಾಮ್​ನಲ್ಲಿ ಅವರಿಗೆ 2.26 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. ಪಂಜಾಬಿ ಚಲನಚಿತ್ರ 'ಓಯೆ ಭೋಲೆ ಓಯೆ' ಚಿತ್ರದಲ್ಲೂ ಇವರು ಅಭಿನಯಿಸಿ ಗಮನ ಸೆಳೆದಿದ್ದರು.

ಆದರೆ, ತಮ್ಮ ಲಿಂಗ ಗುರುತಿನ ಕಾರಣಕ್ಕೆ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲಿಂಗ್ ಹಾಗೂ ಸಲಿಂಗಕಾಮಿ ನಿಂದನೆಗಳನ್ನು ಎದುರಿಸುತ್ತಿದ್ದರು. ಇಷ್ಟೆಲ್ಲಾ ಟೀಕೆಗಳ ನಡುವೆಯೂ ತಮ್ಮ ದೃಢ ನಿಲುವುಗಳಿಂದ ಎಂದಿಗೂ ಹಿಂದೆ ಸರಿದಿರಲಿಲ್ಲ. ಪಾಡ್‌ಕಾಸ್ಟ್‌ಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಲಿಂಗ ಸ್ವಾತಂತ್ರ್ಯ ಹಾಗೂ ಸ್ವಯಂ ಅಭಿವ್ಯಕ್ತಿಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರು.

ದಾಳಿಯ ಹೊಣೆ ಹೊತ್ತ ಭೂಗತ ಪಾತಕಿಗಳು?

ಈ ಗಂಭೀರ ದಾಳಿಯ ಹಿಂದೆ ಗೋಲ್ಡಿ ಧಿಲ್ಲನ್ ಮತ್ತು ಜಗ್ಗಾ ತರಂತರ್ನ್ ಕೈವಾಡವಿದೆ ಎಂದು ಹೇಳಲಾದ ಸಾಮಾಜಿಕ ಮಾಧ್ಯಮ ಪೋಸ್ಟ್ ಈಗ ವೈರಲ್ ಆಗಿದೆ. ಆದರೆ, ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.

Also Read
"ನನ್ನ ತಲೆಗೆ ಬಲವಾಗಿ ಹೊಡೆದ"..."ಕಣ್ಣುಗಳು ಸಂಪೂರ್ಣ ಮಂಜಾಗಿದ್ದವು": ಫ್ಲೈದುಬೈ ಘಟನೆ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​! Captain Smit Machchhar
Mad Sandhu killed in the shooting incident in Amritsar.

ಪಂಜಾಬ್ ಪೊಲೀಸ್ ಮೂಲಗಳ ಪ್ರಕಾರ, ಗೋಲ್ಡಿ ಬ್ರಾರ್‌ನ ಆಪ್ತ ಸಹಾಯಕನಾಗಿರುವ ಗೋಲ್ಡಿ ಧಿಲ್ಲನ್, ಜರ್ಮನಿಯಲ್ಲಿ ಕೆಲವು ತಿಂಗಳುಗಳಿದ್ದು, ಸದ್ಯ ಯುಕೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಚಂಡೀಗಢದ ಔಷಧ ಅಂಗಡಿಯ ಕ್ಯಾಷಿಯರ್ ಜಾನಕಿ ದಾಸ್ ಹತ್ಯೆ ಸೇರಿದಂತೆ ಹಲವು ಸುಲಿಗೆ ಮತ್ತು ಕೊಲೆ ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬಂದಿದ್ದು, NIA ಕೂಡ ಈತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.

ತನಿಖೆ ಚುರುಕುಗೊಳಿಸಿದ ಪೊಲೀಸರು

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಅಮೃತಸರ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ದಾಳಿಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಮ್ಯಾಡ್ ಸಂಧು ಮೇಲಿನ ಈ ಹಲ್ಲೆ ಹಾಗೂ ಇದರ ಹಿಂದಿನ ಅಸಲಿ ಉದ್ದೇಶ ಏನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net