ನಮ್ಮನ್ನ ಸರ್ವನಾಶ ಮಾಡೋಕೆ ಹೊರಟಿದ್ದೀರಿ ...

OTT - Final
Published on

ಬಾಲಿವುಡ್​​ ಮಟ್ಟಿಗೆ ಜೂನ್​ 30 ಒಂದು ಮಹತ್ವದ ದಿನ ಎಂದರೆ ತಪ್ಪಿಲ್ಲ. ಏಕೆಂದರೆ, ಏಳು ದೊಡ್ಡ ಬಜೆಟ್​ನ ಸಿನಿಮಾಗಳು ಓವರ್​ ದಿ ಟಾಪ್​ (ಓಟಿಟಿ)ಯಲ್ಲಿ ಬಿಡುಗಡೆಯಾಗುವ ಕುರಿತು ಇಂದು ಡಿಸ್ನಿ ಹಾಟ್​ಸ್ಟಾರ್​ನವರು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಲ್ಲಿಗೆ, ಬಾಲಿವುಡ್​ನ ಕೆಲವು ಪ್ರಮುಖ ಚಿತ್ರಗಳು ಚಿತ್ರಮಂದಿರಗಳಿಗಿಂಥ ಮುನ್ನವೇ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ನೇರವಾಗಿ ಬಿಡುಗಡೆಯಾಗಲಿವೆ.

ಕಳೆದ ಒಂದು ತಿಂಗಳಿನಿಂದ ಈ ಕುರಿತಾಗಿ ಸುದ್ದಿ ಇದ್ದೇ ಇತ್ತು. ಸದ್ಯದ ಮಟ್ಟಿಗೆ ಓಟಿಟಿಯಲ್ಲಿ ದೊಡ್ಡ ವೇದಿಕೆ ಎನಿಸಿಕೊಂಡಿರುವ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಏನಿಲ್ಲವೆಂದರೂ ಅರ್ಧ ಡಜನ್​ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬ ಸುದ್ದಿ ಕೇಳಿ ಬಂದಿತ್ತು. ಅದಕ್ಕೆ ಸರಿಯಾಗಿ ಇಂದು ಪ್ರಕಟಣೆ ಹೊರಬಿದ್ದಿದೆ.

ಅಕ್ಷಯ್​ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್​, ಅಜಯ್​ ದೇವಗನ್​ ಅಭಿನಯದ ಭುಜ್​ - ದಿ ಪ್ರೈಡ್​ ಆಫ್​ ಇಂಡಿಯಾ, ಸಂಜಯ್​ ದತ್​ ಅಭಿನಯದ ಸಡಕ್​ 2, ಅಭಿಷೇಕ್​ ಬಚ್ಚನ್​ ಅಭಿನಯದ ದಿ ಬಿಗ್​ ಬುಲ್​, ಸುಶಾಂತ್​ ಸಿಂಗ್​ ರಜಪೂತ್​ ಅಭಿನಯದ ಕೊನೆಯ ಚಿತ್ರ ದಿಲ್​ ಬೇಚಾರ, ವಿದ್ಯುತ್​ ಜಾಮ್ವಾಲ್​ ಅಭಿನಯದ ಖುದಾ ಹಾಫಿಜ್​ ಮತ್ತು ಕುನಾಲ್​ ಖೇಮು ಅಭಿನಯದ ಲೂಟ್​ಕೇಸ್​ ಚಿತ್ರಗಳನ್ನು ಮುಂದಿನ ದಿನಗಳಲ್ಲಿ ಒಂದರಹಿಂದೊಂದು ಬಿಡುಗಡೆ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್​ ಹೇಳಿದೆ.

ಈ ಬಗ್ಗೆ ಪ್ರೇಕ್ಷಕರು ಖುಷಿಯಾಗಿದ್ದಾರಾದರೂ, ಚಿತ್ರಮಂದಿರದ ಮಾಲೀಕರು ಬಹಳ ಸಿಟ್ಟಾಗಿದ್ದಾರೆ. ನೀವೆಲ್ಲಾ ಸೇರಿ ನಮ್ಮನ್ನ ಸರ್ವನಾಶ ಮಾಡೋಕೆ ಹೊರಟಿದ್ದೀರಿ ಎಂದು ಗುಡುಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುವುದು ಹೊಸದಲ್ಲವಾದರೂ, ಪ್ರದರ್ಶಕರು ಅಷ್ಟಾಗಿ ಹೆದರಿರಲಿಲ್ಲ. ಏಕೆಂದರೆ, ಮಧ್ಯಮ ಮತ್ತು ಕಡಿಮೆ ಬಜೆಟ್​ನ ಚಿತ್ರಗಳು ಮಾತ್ರ ಓಟಿಟಿಗೆ ಸೂಕ್ತ, ದೊಡ್ಡ ಸ್ಟಾರ್​ಗಳ ಚಿತ್ರಗಳೇನಿದ್ದರೂ ಜನ ಚಿತ್ರಮಂದಿರದಲ್ಲೇ ನೋಡೋಕೆ ಇಷ್ಟಪಡುತ್ತಾರೆ ಎಂದು ನಂಬಿದ್ದರು. ಅದಕ್ಕೆ ಸರಿಯಾಗಿ, ಹಲವು ನಟರು ತಮ್ಮ ಚಿತ್ರಗಳು ಚಿತ್ರಮಂದಿರಗಳಲ್ಲಿ ಮೊದಲು ಬಿಡುಗಡೆಯಾಗಲೀ ಎಂದು ಬಯಸಿದ್ದರು.

ಆದರೆ, ಚಿತ್ರಮಂದಿರದವರ ಯೋಚನೆ ಇದೀಗ ಉಲ್ಟಾ ಹೊಡೆದಿದೆ. ನಿಧಾನಕ್ಕೆ ಬಿಡುಗಡೆಯಾದರೂ ಪರವಾಗಿಲ್ಲ ಎನ್ನುತ್ತಿದ್ದವರೆಲ್ಲಾ ಆದಷ್ಟು ಬೇಗ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಕಾರಣ, ಸದ್ಯಕ್ಕೆ ಚಿತ್ರಮಂದಿರಗಳು ತೆರೆಯುವಂತೆ ಕಾಣುತ್ತಿಲ್ಲ. ಚಿತ್ರ ಪ್ರದರ್ಶನ ಪ್ರಾರಂಭವಾಗುವುದಕ್ಕೆ ಏನಿಲ್ಲವೆಂದರೂ ಐದಾರು ತಿಂಗಳು ಬೇಕು ಎಂದು ಅಂದಾಜಿಸಲಾಗುತ್ತಿದೆ. ಈಗ ಚಿತ್ರ ಮಾಡಿಟ್ಟುಕೊಂಡವರು, ಬಡ್ಡಿ ಕಟ್ಟಲಾಗದೆ ಸುಸ್ತಾಗುತ್ತಿದ್ದಾರೆ. ಅಷ್ಟೇ ಅಲ್ಲ, ತುಂಬಾ ನಿಧಾನ ಮಾಡಿದರೆ, ಜನ ನೋಡುತ್ತಾರೋ ಇಲ್ಲವೋ ಎಂಬ ಭಯ ಅವರನ್ನು ಕಾಡುತ್ತಿದೆ. ಅದೇ ಕಾರಣಕ್ಕೆ ಓಟಿಟಿಯಲ್ಲಿ ಅವಕಾಶ ಸಿಕ್ಕರೆ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.

ಏನೇ ಆದರೂ, ಇಂತಹ ಸಂದರ್ಭದಲ್ಲಿ ಚಿತ್ರರಂಗದವರು ತಮ್ಮ ಜತೆಗೆ ಕೈಜೋಡಿಸುತ್ತಿಲ್ಲ ಎಂಬ ಬೇಸರ ದೇಶಾದ್ಯಂದ ಎಲ್ಲಾ ಚಿತ್ರಮಂದಿರದವರನ್ನು ಕಾಡುತ್ತಿದೆ. ಕಳೆದ ಮೂರೂವರೆ ತಿಂಗಳುಗಳಿಂದ ಚಿತ್ರ ಪ್ರದರ್ಶನ ಮಾಡಿಲ್ಲ. ಮುಂದೆ ಎಷ್ಟು ದಿನಗಳಾಗುತ್ತವೋ ಗೊತ್ತಿಲ್ಲ. ತಾವೂ ಸಹ ಸಾಕಷ್ಟು ಕಷ್ಟ ಅನುಭವಿಸುತ್ತಿರುವುದರಿಂದ, ಇಂತಹ ಸಮಯದಲ್ಲಿ ಚಿತ್ರಮಂದಿರದವರು ತಮ್ಮ ಕೈಜೋಡಿಸಬೇಕಿತ್ತು. ಅದು ಬಿಟ್ಟು, ಓಟಿಟಿ ಕಡೆ ಮುಖ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಚಿತ್ರಮಂದಿರದವರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net