ತಮಿಳುನಾಡಿನಲ್ಲಿ ಸೂರ್ಯ ಸಿನಿಮಾ ಬ್ಯಾನ್ ... ಚಿತ್ರ ಪ್ರದರ್ಶನ ರದ್ದು ಮಾಡಲು ಪ್ರದರ್ಶಕರ ನಿರ್ಧಾರ

Surya Final
Published on

ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಅಭಿನಯದ ಚಿತ್ರಗಳನ್ನು ಬ್ಯಾನ್ ಮಾಡುವುದಕ್ಕೆ ಅಲ್ಲಿನ ಚಿತ್ರಮಂದಿರದವರು ನಿರ್ಧಾರ ಮಾಡಿದ್ದಾರೆ. ಹಾಗೇನಾದರೂ ಆದರೆ, ಇನ್ನು ಮುಂದೆ ಸೂರ್ಯ ಅಭಿನಯದ ಯಾವ ಚಿತ್ರ ಸಹ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದಿಲ್ಲ, ಪ್ರದರ್ಶನವೂ ಕಾಣುವುದಿಲ್ಲ.

ಎಲ್ಲಾ ಬಿಟ್ಟು ಸೂರ್ಯ ಮೇಲೆ ಯಾಕೆ ಚಿತ್ರಮಂದಿರದವರ ಕೆಂಗಣ್ಣು ಎಂಬ ಪ್ರಶ್ನೆ ಎದುರಾಗಬಹುದು. ಅದೇನೆಂದರೆ, ಸೂರ್ಯ ‘ಪೊಣ್ಮಗಳ್ ವಂದಾಳ್’ ಎಂಬ ಚಿತ್ರವನ್ನು, ತಮ್ಮ 2ಡಿ ಎಂಟರ್‌ಟೈನ್‌ಮೆಂಟ್ ಮೂಲಕ ನಿರ್ಮಿಸಿದ್ದಾರೆ. ಅದರಲ್ಲಿ ಅವರ ಹೆಂಡತಿ ಜ್ಯೋತಿಕಾ ನಾಯಕಿಯಾಗಿ ನಟಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ತಿಂಗಳೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಯಾವಾಗ ಲಾಕ್‌ಡೌನ್ ೋಷಣೆಯಾಗಿ ಚಿತ್ರ ಪ್ರದರ್ಶನ ನಿಂತಿತೋ, ಆಗಿ ಬಿಡುಗಡೆಯೂ ಮುಂದಕ್ಕೆ ಹೋಯಿತು. ಈಗ ಲಾಕ್‌ಡೌನ್ ಮುಗಿದರೂ ಸದ್ಯಕ್ಕೆ ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳುವುದು ಕಷ್ಟ. ಒಂದು ಪಕ್ಷ ಬಿಡುಗಡೆಯಾದರೂ ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಾರಾ ಎಂಬ ಸಂಶಯ ಇದೆ. ಆ ಕಾರಣಕ್ಕಾಗಿ, ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕಿಂತ, ನೇರವಾಗಿ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಸೂರ್ಯ ತೀರ್ಮಾನಿಸಿದ್ದಾರೆ.

ಸಮಸ್ಯೆ ಎದುರಾಗಿದ್ದೇ ಇಲ್ಲಿ. ಚಿತ್ರ ಮಾಡೋದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡೋಕೆ. ಅದು ಬಿಟ್ಟು ಹೀಗೆ ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಚಿತ್ರಮಂದಿರದವರ ಗತಿ ಏನು ಎಂಬುದು ಚಿತ್ರಮಂದಿರದವರ ಪ್ರಶ್ನೆ. ಒಂದೋ ನಿರ್ಧಾರ ಬದಲಾಯಿಸಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ. ಇಲ್ಲ, ಇನ್ನು ಮುಂದೆ ನಾವು ನಿಮ್ಮ ಚಿತ್ರಗಳನ್ನೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುವುದಿಲ್ಲ, ನೀವು ಬೇಕಾದರೆ ಒಟಿಟಿಯಲ್ಲಿ ಪ್ರದರ್ಶನ ಮಾಡಿಕೊಳ್ಳಿ ಎಂದು ಪ್ರದರ್ಶಕರೆಲ್ಲಾ ಎಚ್ಚರಿಸಿದ್ದಾರೆ.ಈಗಾಗಲೇ ಸೂರ್ಯ ಅವರಿಗೆ ಈ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಇದರಿಂದ ಸೂರ್ಯ ಅಭಿನಯದ ಬೇರೆ ಚಿತ್ರಗಳ ನಿರ್ಮಾಪಕರೆಲ್ಲಾ ಟೆನ್ಶನ್ ಆಗಿಬಿಟ್ಟಿದ್ದಾರೆ. ಏಕೆಂದರೆ, ಇದರಿಂದ ನೇರವಾಗಿ ಏಟು ಬೀಳುವುದೇ ಅವರ ಚಿತ್ರಗಳಿಗೆ. ಈಗ ಚೆಂಡು ಸೂರ್ಯ ಅಂಗಳದಲ್ಲಿದೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ನಿರ್ಧಾರದಂತೆ ‘ಪೊಣ್ಮಗಳ್ ವಂದಾಳ್’ ಚಿತ್ರವನ್ನು ಅಮೇಜಾನ್ ಪ್ರೈಮ್‌ಗೆ ಬಿಡುತ್ತಾರೋ ಅಥವಾ ಅದರ ಬಿಡುಗಡೆಯನ್ನು ಮುಂದಕ್ಕೆ ಹಾಕಿ, ತಮ್ಮ ಚಿತ್ರಗಳ ಬಿಡುಗಡೆಯನ್ನು ಸುಲಭ ಮಾಡಿಕೊಳ್ಳುತ್ತಾರಾ ಎಂಬುದನ್ನು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net