

ಬೆಂಗಳೂರು: ಇದುವರೆಗೂ ನಟನೆಯ ಜತೆಗೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದ ಎಸ್ತರ್ ನರೋನಾ, ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಟನೆಯ ಜತೆಗೆ ಸಂಗೀತದಲ್ಲಿಯೂ ಮುಂದಿರುವ ಅವರು, ಈ ಆಸಕ್ತಿಯ ಬಗ್ಗೆ ಅಷ್ಟಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ಸದ್ದಿಲ್ಲದೆ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.
‘ಡೇವಿಡ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಶ್ರೇಯಸ್ ಚಿಂಗಾ ಹೊಸ ಸಿನಿಮಾ ನಿರ್ದೇಶನಕ್ಕಿಳಿದಿದ್ದು, ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರದಲ್ಲಿ ನಾಯಕಿಯಾಗಿ ಎಸ್ತರ್ ಆಯ್ಕೆಯಾಗಿದ್ದಾರೆ. ತೆರೆಮೇಲೆ ಕಾಣಿಸಿಕೊಳ್ಳುವುದರ ಜತೆಗೆ ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸುತ್ತಿದ್ದಾರೆ. ಪ್ರೇಮಕಥೆ ಇರುವ ಈ ಸಿನಿಮಾ ಏ.4 ರಂದು ಅಧಿಕೃತವಾಗಿ ಘೋಷಣೆ ಆಗಲಿದ್ದು, ಕನ್ನಡದ ಜತೆಗೆ ಕೊಂಕಣಿ ಭಾಷೆಯಲ್ಲಿಯೂ ಮುಡಿಬರಲಿದೆ.
ಮೊದಲಿಂದಲೂ ಸಂಗೀತ ಮತ್ತು ಹಾಡುಗಾರಿಕೆ ಬಗ್ಗೆ ಒಲವಿರುವ ಎಸ್ತರ್, ಹಲವು ವಾದ್ಯ ನುಡಿಸುವಿಕೆಯ ತರಬೇತಿಯನ್ನೂ ಪಡೆದಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಕಂಪೋಸಿಂಗ್ನಲ್ಲಿಯೂ ತೊಡಗಿಸಿಕೊಂಡಿದ್ದರು. ಇದೀಗ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕಿಯಾಗುವುದರ ಜತೆಗೆ, ಚಿತ್ರದಲ್ಲಿನ ಎರಡು ಹಾಡುಗಳಿಗೆ ಸಾಹಿತ್ಯವನ್ನೂ ಬರೆಯುತ್ತಿದ್ದಾರೆ ಎಸ್ತರ್.
ಈಗಾಗಲೇ ಕನ್ನಡದ ಜತೆಗೆ ತೆಲುಗು, ಕೊಂಕಣಿ, ಹಿಂದಿ, ತಮಿಳಿನಲ್ಲಿಯೂ ಎಸ್ತರ್ ಗುರುತಿಸಿಕೊಂಡಿದ್ದಾರೆ. ‘ಉಸಿರಿಗಿಂತ ನೀನೇ ಹತ್ತಿರ’ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿ, ‘ಅತಿರಥ’, ‘ನುಗ್ಗೆಕಾಯಿ’ ಸೇರಿ ಹಲವು ಸಿನಿಮಾ ಮಾಡಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಶಕೀಲಾ’ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ಎಸ್ತರ್ ನಟಿಸಿದ್ದರು. ಸದ್ಯ ‘ಲಂಕೆ’, ‘ಡಿಎನ್ಎ’, ‘ಲೋಕಲ್ ಟ್ರೇನ್’ ಸಿನಿಮಾ ಕೆಲಸಗಳನ್ನು ಮುಗಿಸಿದ್ದಾರೆ. ಇನ್ನೇನು ಈ ಎಲ್ಲ ಚಿತ್ರಗಳು ಈ ವರ್ಷವೇ ಬಿಡುಗಡೆ ಆಗಲಿವೆ.