ಬೆಣ್ಣೆ ಕಾಫಿ ಕುಡಿದಿದ್ದೀರಾ?; ನೋಡಿ.. ಇಲ್ಲಿ ಇಪ್ಪತ್ತು ವರ್ಷಗಳಿಂದ ಸಿಗುತ್ತಿದೆ 'ಬಟರ್ ಕಾಫಿ'..!

Untitled-F
Published on

ನವದೆಹಲಿ: ಬೆಣ್ಣೆ ಮಸಾಲೆದೋಸೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ, ತಿಂದಿರುತ್ತೀರಿ ಕೂಡ. ಆದರೆ ಬೆಣ್ಣೆ ಕಾಫಿ ಎಂದರೆ ಎಲ್ಲರೂ ಒಮ್ಮೆ ಹುಬ್ಬೇರಿಸಿದರೂ ಅಚ್ಚರಿ ಏನಲ್ಲ. ಅದಾಗ್ಯೂ ಇಲ್ಲೊಂದು ಕಡೆ ಬೆಣ್ಣೆಯನ್ನೂ ಹಾಕಿ ಕಾಫಿ ಮಾಡಿಕೊಡಲಾಗುತ್ತಿದೆ. ಹಾಗಂತ ಇದೇನೂ ನಿನ್ನೆ ಮೊನ್ನೆಯಿಂದಲ್ಲ, ಸುಮಾರು ಇಪ್ಪತ್ತು ವರ್ಷಗಳಿಂದ ಇಲ್ಲೊಂದು ಕಡೆ ಬೆಣ್ಣೆ ಕಾಫಿ ಮಾಡಿಕೊಡಲಾಗುತ್ತಿದೆ.

ಇಲ್ಲೊಬ್ಬರು ಈ ಬೆಣ್ಣೆ ಕಾಫಿಯನ್ನು ಮಾಡಿಕೊಡುತ್ತಿದ್ದಾರೆ. ಮೊದಲಿಗೆ ಲೋಟಕ್ಕೆ ಹಾಲು ಹಾಕಿ, ಕಾಫಿ ಪುಡಿ ಹಾಕಿ ನಂತರ ಒಂದಷ್ಟು ಬೆಣ್ಣೆಯನ್ನೂ ಹಾಕಿ, ಸಕ್ಕರೆ ಬೆರೆಸುತ್ತಾರೆ. ಬಳಿಕ ಈ ಕಾಫಿ ಮೇಲೆ ಕೊಕೊವಾ ಪುಡಿ ಸಿಂಪಡಿಸಿ ಕುಡಿಯಲು ಕೊಡುತ್ತಾರೆ. ಇಂಥದ್ದೊಂದು ಕಾಫಿಯನ್ನು ಅಮರ್ ಸಿರೋಹಿ ಎಂಬವರು ಕುಡಿದಿದ್ದು, ಅದರ ಅನುಭವ, ಆ ಕಾಫಿ ಮಾಡುವ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹಳೇ ದೆಹಲಿಯ ಹವೇಲಿ ಭಕ್ತಾವರ್​ ಲೇನ್​ನ ಜಾಮಾ ಮಸೀದಿ ಬಳಿ ಇರುವ ಬೀದಿಬದಿಯ ಅಂಗಡಿಯೊಂದರಲ್ಲಿ ಇಪ್ಪತ್ತು ವರ್ಷಗಳಿಂದ ಬೆಣ್ಣೆಯ ಕಾಫಿ ಮಾಡಿ ಮಾರುತ್ತಿದ್ದಾರೆ. ಅಮರ್​ ಸಿರೋಹಿ ಈ ಕಾಫಿಯ ರುಚಿ ನೋಡಿದ್ದು, ಇದು ನಾನು ಅಂದುಕೊಂಡಷ್ಟು ಭಯಂಕರವಾಗಿಲ್ಲ. ಹಾಗೆಯೇ ಹೇಳಿಕೊಳ್ಳುವಷ್ಟು ಅದ್ಭುತ ರುಚಿಯದ್ದಾಗಿಯೂ ಇಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಈ ಕಾಫಿಯ ಬೆಲೆ ಮೂವತ್ತು ರೂಪಾಯಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net