

ಮುಂಬೈ: ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಚಿತ್ರದಲ್ಲಿ 'ಕಿಸ್ಸಿಂಗ್ ಸ್ಟಾರ್' ಎಂದೇ ಜನಪ್ರಿಯರಾಗಿರುವ ಇಮ್ರಾನ್ ಹಶ್ಮಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ಅವರ ಪಾತ್ರವೇನು ಎಂಬ ಪ್ರಶ್ನೆಗೆ, ಚಿತ್ರತಂಡದವರು ತುಟಿಬಿಚ್ಚಿರಲಿಲ್ಲ.
ಇದೀಗ ಚಿತ್ರತಂಡದವರು ಇಮ್ರಾನ್ ಪಾತ್ರದ ಬಗ್ಗೆ ಯಾವೊಂದು ರಹಸ್ಯವನ್ನು ಬಿಟ್ಟುಕೊಡದಿದ್ದರೂ, ಚಿತ್ರದಲ್ಲಿ ಇಮ್ರಾನ್ ಏನು ಮಾಡುತ್ತಾರೆ ಎಂಬ ವಿಷಯ ಅದ್ಹೇಗೋ ಲೀಕ್ ಆಗಿದೆ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಇಮ್ರಾನ್, ಐಎಸ್ಐ ಏಜೆಂಟ್ ಆಗಿ ನಟಿಸುತ್ತಿದ್ದಾರಂತೆ.
'ಟೈಗರ್' ಸರಣಿಯ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಅವರದ್ದು ರಾ ಏಜೆಂಟ್ನ ಪಾತ್ರ ಎಂದು ಗೊತ್ತೇ ಇದೆ. ಇನ್ನು, ಐಎಸ್ಐ ಏಜೆಂಟ್ನ ಪಾತ್ರದಲ್ಲಿ ಇಮ್ರಾನ್ ಕಾಣಿಸಿಕೊಂಡರೆ, ಇದೊಂದು ರಾ ವರ್ಸಸ್ ಐಎಸ್ಐ ನಡುವಿನ ಕಲಹದ ಕುರಿತಾಗಿ ಚಿತ್ರವಾಗರಲಿದೆಯಂತೆ. ಸಲ್ಮಾನ್ ಖಾನ್ ಇಲ್ಲಿ ಭಾರತದ ಟೈಗರ್ ಆದರೆ, ಪಾಕಿಸ್ತಾನದ ಟ್ಐಗರ್ ಆಗಿ ಇಮ್ರಾನ್ ನಟಿಸುತ್ತಿದ್ದಾರಂತೆ. ಒಟ್ಟಾರೆ, ಚಿತ್ರದಲ್ಲಿ ಅವರಿಬ್ಬರ ಮಧ್ಯೆ ದೊಡ್ಡ ಮಟ್ಟದ ಕ್ಲಾಶ್ ನೋಡಬಹುದು ಎಂದು ಹೇಳಲಾಗುತ್ತಿದೆ.
'ಟೈಗರ್ 3' ಚಿತ್ರದ ಚಿತ್ರೀಕರಣ ಮಾರ್ಚ್ನಲ್ಲೇ ಪ್ರಾರಂಭವಾಗಿತ್ತು. ಆದರೆ, ಲಾಕ್ಡೌನ್ ಘೋಷಣೆಯಾದ ಕಾರಣ ಸದ್ಯಕ್ಕೆ ನಿಂತಿದೆ. ಈ ಚಿತ್ರದಲ್ಲಿ ಸಲ್ಮಾನ್ಗೆ ನಾಯಕಿಯಾಗಿ ಕತ್ರೀನಾ ನಟಿಸುತ್ತಿದ್ದಾರೆ. ಮನೀಷ್ ಶರ್ಮ ನಿರ್ದೇಶನದ ಈ ಚಿತ್ರವನ್ನು ಯಶ್ರಾಜ್ ಸಂಸ್ಥೆ ನಿರ್ಮಿಸುತ್ತಿದೆ.