ರಿಯಲ್​ ಸ್ಟೋರಿಯಲ್ಲಿ ರಾಣ; ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ "ಏಕ್​ಲವ್ಯಾ' ನಟ

zvdfvb
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನಿರ್ದೇಶಕ ತರುಣ್​ ಸುಧೀರ್​ ಇದೀಗ ನಿರ್ಮಾಣದತ್ತ ಗಮನ ಹರಿಸಿದ್ದು, ಕಳೆದ ಡಿಸೆಂಬರ್​ನಲ್ಲಿ ಹೊಸ ಸಿನಿಮಾ ಘೋಷಿಸಿದ್ದರು. 2022ರಲ್ಲಿ ಜಡೇಶ್​ ಹಂಪಿ ನಿರ್ದೇಶಿಸಿದ್ದ "ಗುರು ಶಿಷ್ಯರು' ನಿರ್ಮಿಸಿದ್ದ ತರುಣ್​, ಈಗ "ಪ್ರೊಡಕ್ಷನ್​ ನಂ. 2' ಅನೌನ್ಸ್​ ಮಾಡಿದ್ದು, ಅವರ ಜತೆ ಅಟ್ಲಾಂಟಾ ನಾಗೇಂದ್ರ ಕೈ ಜೋಡಿಸಿದ್ದಾರೆ. ಪುನೀತ್​ ಗುರುಸ್ವಾಮಿ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲಿದ್ದು, ಕನ್ನಡದ ಜತೆ ತಮಿಳು, ತೆಲುಗು ಭಾಷೆಗಳಲ್ಲೂ ಈ ಸಿನಿಮಾ ಮೂಡಿಬರಲಿದೆ. ಇದು 2000ರಲ್ಲಿ ನಡೆದ ನೈಜ ಘಟನೆಯಾಧಾರಿಸಿದ ಚಿತ್ರವಾಗಿದ್ದು, ಇತ್ತೀಚೆಗಷ್ಟೆ ಟೀಸರ್​ ಮೂಲಕ ನಾಯಕನನ್ನು ಪರಿಚಯಿಸಿದ್ದಾರೆ.

2022ರ "ಏಕ್​ಲವ್ಯಾ' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಕ್ಷಿತಾ ಪ್ರೇಮ್​ ಸಹೋದರ ರಾಣ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕನ ಆಯ್ಕೆಯ ಬಗ್ಗೆ ನಿರ್ಮಾಪಕ ತರುಣ್​ ಸುಧೀರ್​, "ಬಾಯ್​ ನೆಕ್ಸ್ಟ್​ ಡೋರ್​ನಂತೆ ಕಾಣುವ, ಎಲ್ಲರಿಗೂ ಕನೆಕ್ಟ್​ ಆಗುವ ಲುಕ್ಸ್​ ಇರುವ ಹಾಗೇ ಇಮೇಜ್​ ಇಲ್ಲದ ನಾಯಕನಿಗಾಗಿ ಹುಡುಕುತ್ತಿದ್ದೆವು. ರಾಣ ನಮ್ಮ ಚಿತ್ರದ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತಾರೆ ಅಂತನ್ನಿಸಿ, ಅವರನ್ನು ಆಯ್ಕೆ ಮಾಡಿಕೊಂಡೆವು. "ಏಕ್​ಲವ್ಯಾ' ಚಿತ್ರದಲ್ಲಿ ರಾಣ ಮೂರು ಶೇಡ್​ಗಳಲ್ಲಿ ನಟಿಸಿದ್ದರು. ಹೊಸಬರಾದರೂ ಚೆನ್ನಾಗಿ ಪಾರ್ಮ್​ರ್ ಮಾಡುತ್ತಾರೆ' ಎಂದು ಮಾಹಿತಿ ನೀಡುತ್ತಾರೆ.

ಸೋಮವಾರದಿಂದ ಚಿತ್ರೀಕರಣ

ಸೋಮವಾರದಿಂದ ಚಿತ್ರದ ಶೂಟಿಂಗ್​ ಪ್ರಾರಂಭವಾಗಿದ್ದು, ಚಾಮರಾಜನಗರ ಮತ್ತು ತಮಿಳುನಾಡು ಗಡಿ ಪ್ರದೇಶ ಮತ್ತು ಸೇಲಂ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾ$್ಯನ್​ ಮಾಡಿಕೊಂಡಿದೆ. "ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಆದರೆ, ಯುಗಾದಿ ಹಬ್ಬದೊಳಗೆ ಟೈಟಲ್​ ಘೋಷಿಸಲು ಚರ್ಚಿಸುತ್ತಿದ್ದೇವೆ. 50ರಿಂದ 55 ದಿನಗಳ ಒಂದೇ ಶೆಡ್ಯೂಲ್​ನಲ್ಲಿ ಮಾರ್ಚ್​ವರೆಗೂ ಶೂಟಿಂಗ್​ ನಡೆಸಲಿದ್ದೇವೆ. ಫೆಬ್ರವರಿಯಲ್ಲಿ ರಾಣ ಮದುವೆಗಾಗಿ 10 ದಿನ ಬ್ರೇಕ್​ ತೆಗೆದುಕೊಳ್ಳಲಿದ್ದಾರೆ. ಆ ಸಮಯದಲ್ಲಿ ಬೇರೆ ಪಾತ್ರಗಳ ಚಿತ್ರೀಕರಣ ನಡೆಯಲಿದೆ. ಈ ವರ್ಷವೇ ಸಿನಿಮಾ ರಿಲೀಸ್​ ಮಾಡಲಿದ್ದೇವೆ' ಎನ್ನುತ್ತಾರೆ ತರುಣ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net