

'ಜೋಗಿ' ಪ್ರೇಮ್ ನಿರ್ದೇಶಕದ 'ಏಕ್ ಲವ್ ಯಾ' ಚಿತ್ರ ಕಳೆದ ವರ್ಷವೇ ಸೆಟ್ಟೇರಿ ಬಹುತೇಕ ಮುಗಿದಿತ್ತು. ಎರಡು ಹಾಡುಗಳು ಸೇರಿದಂತೆ ಒಂದಿಷ್ಟು ಚಿತ್ರೀಕರಣ ಮುಗಿಸಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಯಿತು. ಬೇರೆ ದಾರಿ ಇಲ್ಲದೆ, ಪ್ರೇಮ್ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಸುಮ್ಮನಿರುವಂತಾಯಿತು.
ಈಗ ಲಾಕ್ಡೌನ್ ಮುಗಿದಿದೆ. ಕರೊನಾ ಹಾವಳಿಯ ನಡುವೆಯೇ ಹಲವು ಚಿತ್ರತಂಡಗಳು ಚಿತ್ರೀಕರಣ ಪ್ರಾರಂಭಿಸಿವೆ. ಪ್ರೇಮ್ ಸಹ ಮುಂದಿನ ತಿಂಗಳಿನಿಂದ ಚಿತ್ರೀಕರಣ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ, 'ಏಕ್ ಲವ್ ಯಾ' ಚಿತ್ರದ ಮೇಕಿಂಗ್ ಟೀಸರ್, ಗಣಪತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್ನ ಎ2 ಮ್ಯೂಸಿಕ್ ಚಾನಲ್ನಲ್ಲಿ ಈ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಪ್ರೇಮ್ ಚಿತ್ರೀಕರಣ ಸಮಯದಲ್ಲಿ ಹೇಗಿರುತ್ತಾರೆ ಎಂಬುದನ್ನು ನೋಡಬಹುದಾಗಿದೆ.
'ಏಕ್ ಲವ್ ಯಾ' ಚಿತ್ರದಲ್ಲಿ ಪ್ರೇಮ್ ಅವರ ಬಾಮೈದ ರಾಣಾ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ 'ದಿ ವಿಲನ್' ಚಿತ್ರದಲ್ಲಿ ಪ್ರೇಮ್ಗೆ ಸಹಾಯಕರಾಗಿ ಕೆಲಸ ಮಾಡಿ, ಒಂದಿಷ್ಟು ಅನುಭವ ಪಡೆದುಕೊಕಂಡಿದ್ದ ರಾಣಾ, ಈಗ ಈ ಚಿತ್ರದ ಮೂಲಕ ನಾಯಕರಾಗಿ ನಟಿಸುತ್ತಿದ್ದಾರೆ. ಇನ್ನು ಅವರಿಗೆ ನಾಯಕಿಯರಾಗಿ ಗ್ರೀಷ್ಮಾ ಮತ್ತು ರಚಿತಾ ರಾಮ್ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಇನ್ನು, 'ಟಗರು', 'ರುಸ್ತುಂ' ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಮಹೇಂದ್ರ ಸಿಂಹ ಇಲ್ಲೂ ಛಾಯಾಗ್ರಹಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.