ಧನು ಹ್ಯಾಟ್ರಿಕ್​ ಹರ್ಷ; "ಎಡಗೈ ಅಪಘಾತಕ್ಕೆ ಕಾರಣ' ಬೆನ್ನಲ್ಲೇ ನಟಿ, ಮೂರು ಚಿತ್ರಗಳಲ್ಲಿ ಬಿಜಿ

asc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಎಡಗೈಯೇ ಅಪಘಾತಕ್ಕೆ ಕಾರಣ' ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ ಧನು ಹರ್ಷ, ಅದರ ಬೆನ್ನಲ್ಲೇ ಹ್ಯಾಟ್ರಿಕ್​ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಳ್ಳುವ ಧನು, ""ಎಡಗೈಯೇ ಅಪಘಾತಕ್ಕೆ ಕಾರಣ'ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನನ್ನ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾಲೇಜು ದಿನಗಳಿಂದಲೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ನಾನು ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದೆ. ಆ ಮೂಲಕ ಸಿನಿಮಾದಲ್ಲಿ ಅವಕಾಶ ದೊರೆಯಿತು. ಇದೀಗ ಒಳ್ಳೆ ಆರ್​ಗಳು ಬರುತ್ತಿವೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ. ಬೆಂಗಳೂರಿನ ಹುಡುಗಿ ಧನು ಸದ್ಯ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಅದರ ಜತಜತೆಗೇ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ರಂಗಭೂಮಿಯಿಂದ ಚಿತ್ರರಂಗದೆಡೆಗೆ

ಮೌಂಟ್​ ಕಾರ್ಮೆಲ್​ ಕಾಲೇಜಿನಲ್ಲಿ ಓದುತ್ತಿರುವಾಗಲೇ ಥಿಯೇಟರ್​ ಆಸಕ್ತಿ ಚಿಗೊರೆಡೆದು, ಧನು ರಂಗ ತಂಡ ಸೇರಿಕೊಂಡರಂತೆ. "ನಮ್ಮ ಕಾಲೇಜಿನ ರಂಗತಂಡದ ಮೂಲಕ ಬೇರೆ ಬೇರೆ ಥಿಯೇಟರ್​ ಗ್ರೂಪ್​ಗಳು ಪರಿಚಯವಾದವು. ಕನ್ನಡ, ಇಂಗ್ಲೀಷ್​, ಹಿಂದಿ ಭಾಷೆಗಳಲ್ಲೂ ಹಲವು ನಾಟಕಗಳಲ್ಲಿ ನಟಿಸಿದ್ದೇನೆ. ಸಿನಿಮಾದಲ್ಲಿ ಅವಕಾಶ ದೊರೆಯಿತು ಅಂತ ರಂಗಭೂಮಿಯಿಂದ ದೂರವಾಗಿಲ್ಲ. ಕಳೆದ ತಿಂಗಳು "ಸಮಯ' ಎಂಬ ನಾಟಕದ ಮೂರು ಶೋಗಳನ್ನು ನೀಡಿದೆವು. ಮುಂದಿನ ತಿಂಗಳು ಸಹ ನಾಟಕ ಪ್ರದರ್ಶನವಿರಲಿದೆ. ಎಮೋಟಿಕಾನ್ಸ್​, ಬೆಂಗಳೂರು ಲಿಟಲ್​ ಥಿಯೇಟರ್​ ಸೇರಿ ಕೆಲ ತಂಡಗಳ ಜತೆ ನಾಟಕಗಳನ್ನು ಮಾಡುತ್ತಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.

ಸಾಲಿನಲ್ಲಿವೆ ಮೂರು ಚಿತ್ರಗಳು

ಈಗಾಗಲೇ "ಸ್ಟ್ರಿಂಗ್ಸ್​' ಎಂಬ ಮತ್ತೊಂದು ಚಿತ್ರದಲ್ಲಿ ಧನು ನಟಿಸಿದ್ದು, "ಇದು ಫಿಲಂ ೆಸ್ಟಿವಲ್​ಗಾಗಿಯೇ ಮಾಡಿದ ಚಿತ್ರ. ನಾನು ಚೆಲೋ ಎಂಬ ಸಂಗೀತ ವಾದ್ಯ ನುಡಿಸುವ ವಿಶೇಷಚೇತನ ಮ್ಯೂಸಿಷಿಯನ್​ ಪಾತ್ರದಲ್ಲಿ ನಟಿಸಿದ್ದೇನೆ. ಸವಾಲಿನ ಪಾತ್ರವಾಗಿತ್ತು. ವಿಶೇಷಚೇತನ ಮಕ್ಕಳ ಸಂಸ್ಥೆಗೆ ಹೋಗಿ, ಅಲ್ಲಿನ ಮಕ್ಕಳ ಜತೆ ಮಾತನಾಡಿದೆ. ಅವರು ಟಿವಿ ಹೇಗೆ ನೋಡುತ್ತಾರೆ? ಮೊಬೈಲ್​ ಬಳುಸುವುದು ಹೇಗೆ? ಸಿನಿಮಾ ಕೇಳಿಸಿಕೊಂಡೇ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ರೀತಿ, ಅವರ ಹಾವ-ಭಾವಗಳನ್ನು ಕಲಿತೆ. ಜತೆಗೆ ಕೆಲ ಸಿನಿಮಾಗಳನ್ನು ಸಹ ನೋಡಿದೆ. ಕಿಶೋರ್​, ಸುಧಾ ಬೆಳವಾಡಿ, ಮಂದಾರ ಭಟ್ಟಲಹಳ್ಳಿ ಕೂಡ ಚಿತ್ರದಲ್ಲಿದ್ದಾರೆ' ಎಂದು ಮಾಹಿತಿ ನೀಡುತ್ತಾರೆ.

ಮಾನಸಿಕ, ದೈಹಿಕ ಸಿದ್ಧತೆ

ರಂಗಭೂಮಿ ಹಿನ್ನೆಲೆಯ ಕಲಾವಿದರು ಪಾತ್ರಗಳಿಗೆ ಸಿದ್ಧತೆ ಮಾಡಿಕೊಳ್ಳುವ ರೀತಿಯೇ ವಿಶೇಷ. ಧನು ಹರ್ಷ ಕೂಡ, "ಕೇವಲ ಮುಖಭಾವದಿಂದ ನಟಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರೇಕ್ಷಕರಿಗೆ ತೆರೆಯ ಮೇಲೆ ಮೊದಲು ಕಾಣಿಸುವುದೇ ಪಾತ್ರದ ಬಾಡಿ ಲಾಂಗ್ವೇಜ್​. ಹೀಗಾಗಿ ಪ್ರತಿ ಪಾತ್ರ ಸಿಕ್ಕಾಗಲೂ ಅದರ ಬಾಡಿ ಲಾಂಗ್ವೇಜ್​ ಹೇಗಿರಬೇಕು? ನಡೆಯುವ ರೀತಿ, ಭಾವ&ಭಂಗಿಗಳನ್ನು ರೂಢಿಸಿಕೊಳ್ಳುತ್ತೇನೆ. ಹಾಗೇ ಪ್ರತಿ ಪಾತ್ರದ್ದೂ ಒಂದು ಸಂರ್ಷವಿರುತ್ತದೆ. ಆ ಪಾತ್ರದ ತತ್ವಮೌಲ್ಯಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೇನೆ. ಆಗ ಆ ಪಾತ್ರವಾಗಲು ಸಾಧ್ಯವಾಗುತ್ತದೆ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net