

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಗುರು ಶಿಷ್ಯರು' ನಿರ್ದೇಶಕ ಜಡೇಶ್ ಕೆ. ಹಂಪಿ ಮತ್ತು "ದುನಿಯಾ' ವಿಜಯ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ "ಲ್ಯಾಂಡ್ಲಾರ್ಡ್' ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಡಬ್ಬಿಂಗ್ ಆರಂಭಿಸಿರುವುದಾಗಿ ಇತ್ತೀಚೆಗೆ ವಿಜಯ್ ಮಾಹಿತಿ ನೀಡಿದ್ದರು. ಇದೀಗ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಹೊಸ ವಿಚಾರ ಹಂಚಿಕೊಂಡಿದೆ.
ಹೌದು, "ಲ್ಯಾಂಡ್ಲಾರ್ಡ್' ಚಿತ್ರದ ಆಡಿಯೋ ಹಕ್ಕುಗಳನ್ನು ದಾಖಲೆ ಬೆಲೆಗೆ ಆನಂದ್ ಆಡಿಯೋ ಖರೀಸಿದೆ ಎಂದು ತಂಡ ಹೇಳಿಕೊಂಡಿದೆ. ಹಾಗೆಯೇ, ನಟ ವಿಜಯ್ರ ಹೊಸ ಪೋಸ್ಟರ್ ರಿವೀಲ್ ಮಾಡಿದೆ. ಪೋಸ್ಟರ್ನಲ್ಲಿ ವಿಜಯ್ ಕತ್ತಿ ಹಿಡಿದಿದ್ದು, ಇಡೀ ದೇಹ ರಕ್ತಸಿಕ್ತವಾಗಿದೆ. ಅವರ ಹಿಂದೆ ಬೆಂಕಿ ಧಗಧಗಿಸುತ್ತಿದ್ದು, ಅವರತ್ತ ಕೊಡಲಿಗಳು ತೂರಿಬರುತ್ತಿರುವ ಪೋಸ್ಟರ್ ಚಿತ್ರದ ನಿರೀಕ್ಷೆ ಹೆಚ್ಚಿಸುವಂತಿದೆ.
ಇನ್ನು "ಲ್ಯಾಂಡ್ಲಾರ್ಡ್'ನಲ್ಲಿ ವಿಜಯ್ಗೆ ರಚಿತಾ ರಾಮ್ ನಾಯಕಿಯಾಗಿದ್ದು, ವಿಜಯ್ ಪುತ್ರಿ ರಿತನ್ಯಾ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಅಜನೀಶ್ ಲೋಕನಾಥ್ ಸಂಗೀತ, ಸ್ವಾಮಿ ಜೆ. ಗೌಡ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಅಂದುಕೊಂಡಂತಾದರೆ, "ಲ್ಯಾಂಡ್ಲಾರ್ಡ್' ದಸರಾ ಅಥವಾ ದೀಪಾವಳಿಗೆ ತೆರೆ ಮೇಲೆ ಬರಲು ಸಿದ್ಧತೆ ನಡೆಸುತ್ತಿದೆ.