ಕಾಮಿಡಿ ಕಾಗೆ ಬಂಗಾರ: ಕುತೂಹಲ ಮೂಡಿಸಿದ್ದ ಪ್ರಶ್ನೆಗೆ ದುನಿಯಾ ಸೂರಿ ಉತ್ತರ

Duniya Suri
Published on

ಬೆಂಗಳೂರು: 2015ರಲ್ಲಿ ‘ಕೆಂಡಸಂಪಿಗೆ’ ಸಿನಿಮಾ ಮಾಡಿ, ಆ ಚಿತ್ರದ ಕೊನೆಯಲ್ಲಿ ಅದರ ಮುಂದುವರಿದ ಭಾಗವಾಗಿ ‘ಕಾಗೆಬಂಗಾರ’ ಚಿತ್ರ ಸಿದ್ಧವಾಗಲಿದೆ ಎಂಬ ಸುಳಿವು ನೀಡಿದ್ದರು ನಿರ್ದೇಶಕ ಸೂರಿ. ಆದರೆ, ಅಭಿಮಾನಿಗಳು ಬರೋಬ್ಬರಿ ನಾಲ್ಕೂವರೆ ವರ್ಷ ಕಾದಿದ್ದೇ ಬಂತು, ಆ ಸಿನಿಮಾ ಬಗ್ಗೆ ಸುದ್ದಿನೇ ಇರಲಿಲ್ಲ. ಈಗ ‘ಪಾಪ್​ಕಾರ್ನ್ ಮಂಕಿ ಟೈಗರ್’ ಮೂಲಕ ಆ ಚಿತ್ರ ಮತ್ತೆ ಶುರುವಾಗಲಿದೆ ಎಂಬುದನ್ನು ಹೇಳಿದ್ದಾರೆ. ಅಷ್ಟೇ ಅಲ್ಲ ಇದೇ ವರ್ಷದಲ್ಲಿ ‘ಕಾಗೆಬಂಗಾರ’ ಸಿನಿಮಾ ಬಿಡುಗಡೆಯೂ ಆಗಲಿದೆಯಂತೆ.

ಹೌದು, ‘ಕಾಗೆಬಂಗಾರ’ದಲ್ಲಿ ಈ ಮೊದಲೇ ಹೇಳಿದಂತೆ ಪ್ರಶಾಂತ್ ಸಿದ್ಧಿ ಮತ್ತು ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿತ್ತು. ಹಾಗಾದರೆ ‘ಕಾಗೆಬಂಗಾರ’ವೂ ಹಾಗೇ ಇರಲಿದೆಯೇ? ಇಲ್ಲ ಎಂಬ ಉತ್ತರ ಸೂರಿ ಅವರಿಂದಲೇ ಸಿಕ್ಕಿದೆ. ಕಾಮಿಡಿ ಶೈಲಿಯಲ್ಲಿ ‘ಕಾಗೆಬಂಗಾರ’ ಸಿನಿಮಾ ತೆರೆಗೆ ತರಲು ಪ್ಲಾ್ಯನ್ ಮಾಡಿದ್ದು, ಮೊದಲ ಬಾರಿ ನಗಿಸುವ ಕೆಲಸಕ್ಕೆ ಕೈಹಾಕಲಿದ್ದಾರೆ.

ಈಗಾಗಲೇ ಸಿನಿಮಾ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟದಲ್ಲಿರುವ ಸೂರಿ ಆಂಡ್ ಟೀಮ್ ಶೀಘ್ರದಲ್ಲಿ ಶೂಟಿಂಗ್​ಗೆ ಚಾಲನೆ ನೀಡಲಿದೆ. ಈಗಾಗಲೇ ‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾಕ್ಕೆ ತಾಂತ್ರಿಕವಾಗಿ ಕೆಲಸ ಮಾಡಿದ ಸಂಗೀತ ನಿರ್ದೇಶಕ ಚರಣ್​ರಾಜ್, ಛಾಯಾಗ್ರಾಹಕ ಶೇಖರ್, ಸಂಕಲನಕಾರ ದೀಪು ಎಸ್. ಕುಮಾರ್ ಸೇರಿ ಹಲವರು ‘ಕಾಗೆಬಂಗಾರ’ದಲ್ಲೂ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದ್ದು, ಸುಧೀರ್ ಕೆ.ಎಂ. ಅವರೇ ನಿರ್ಮಾಣ ಮಾಡುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net