ರಶ್ಮಿಕಾ, ಇದು ನೀವಂದುಕೊಂಡಷ್ಟು ಸುಲಭವಲ್ಲ; ಟಾಲಿವುಡ್​ನಲ್ಲಿ ಎದುರಾಯ್ತು ಹೀಗೊಂದು ಚಾಲೆಂಜ್​!

EIw6QY7UEAA4I4k
Published on

ರಶ್ಮಿಕಾ ಮಂದಣ್ಣ. ಸದ್ಯ ದಕ್ಷಿಣ ಭಾರತದ ಸೆನ್ಷೆಷನ್​ ನಟಿ. ಕನ್ನಡದ ಹುಡುಗಿಯಾದರೂ, ಬೇರೆ ಭಾಷೆಯ ನೆಲದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಸ್ಟಾರ್ ನಾಯಕರ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗಿ, ಅಚ್ಚರಿ ಮೂಡಿಸುತ್ತಿದ್ದಾರೆ. ಬಗೆಬಗೆ ಪಾತ್ರಗಳ ಮೂಲಕ ತಮ್ಮೊಳಗಿನ ಟ್ಯಾಲೆಂಟ್​ ಪ್ರದರ್ಶಿಸುತ್ತಿದ್ದಾರೆ. ಆದರೆ, ಇದೀಗ ಅವರಿಗೆ ಹೊಸದೊಂದು ಚಾಲೆಂಜ್​ ಎದುರಾಗಿದೆ. ಅದನ್ನು ಎದುರಿಸಲು ರಶ್ಮಿಕಾ ಸಿದ್ಧವಾಗಲೇಬೇಕು.

ಹೌದು, ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಭಾಷಾ ಸೊಗಡು ಒಂದು ರೀತಿಯಾದರೆ, ಅದೇ ಕನ್ನಡ ದಕ್ಷಿಣದ ಜಿಲ್ಲೆಗಳಲ್ಲಿ ಬೇರೆಯಾಗುತ್ತದೆ. ಅದೇ ರೀತಿ ಆಂಧ್ರದಲ್ಲೂ ತೆಲುಗು ಒಂದೇ ಆದರೂ, ಪ್ರದೇಶ ಬದಲಾವಣೆ ಆದಂತೆ, ಭಾಷಾ ಸೊಗಡೂ ಬದಲಾಗುತ್ತದೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ; ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾ. ಅಂದರೆ, ಅಲ್ಲು ಅರ್ಜುನ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಪುಷ್ಪ’ ಸಿನಿಮಾದಲ್ಲಿ ಚಿತ್ತೂರಿನ ಪ್ರಾದೇಶಿಕತೆ ಹೆಚ್ಚು ಕಾಣಿಸಿಕೊಳ್ಳಲಿದೆ. ಆ ಭಾಗದ ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದು, ಅಲ್ಲಿನ ಭಾಷೆಯಲ್ಲಿಯೇ ಡಬ್​ ಮಾಡಬೇಕಿದೆ.

ಇತ್ತೀಚಿನ ದಿನಗಳಲ್ಲಿ ತಾವು ನಟಿಸಿದ ತೆಲುಗು ಸಿನಿಮಾಗಳಿಗೆ ತಾವೇ ಡಬ್​ ಮಾಡುತ್ತಿದ್ದಾರೆ ರಶ್ಮಿಕಾ. ಹಾಗಾಗಿ ಭಾರೀ ಕುತೂಹಲ ಸೃಷ್ಟಿಸಿರುವ ಪುಷ್ಪ ಚಿತ್ರಕ್ಕೂ ಅವರೇ ಡಬ್​ ಮಾಡುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಆದರೆ, ಹೈದ್ರಾಬಾದ್​ ಭಾಗದ ತೆಲುಗು ಭಾಷೆಗೆ ಹೋಲಿಕೆ ಮಾಡಿದರೆ, ಚಿತ್ತೂರಿನ ತೆಲುಗು ಕೊಂಚ ಬಿರುಸು. ಅವರ ಪಾತ್ರವೂ ಹಾಗೆಯೇ ಇರುವುದರಿಂದ ನಿಜಕ್ಕೂ ಅವರ ಕರಿಯರ್​ನಲ್ಲೇ ಇದು ಚಾಲೆಂಜಿಂಗ್​ ಪಾತ್ರವಾಗಲಿದೆಯಂತೆ. ಒಂದು ವೇಳೆ ಅಲ್ಲಿನ ಭಾಷಾ ಸೊಗಡಿಗೆ ಸರಿಯಾಗಿ ಹೊಂದಾಣಿಕೆ ಆದರೆ ಮಾತ್ರ ಅವರೇ ಡಬ್​ ಮಾಡಲಿದ್ದಾರೆ. ಒಂದು ವೇಳೆ ಆಗದಿದ್ದರೆ, ಡಬ್ಬಿಂಗ್​ ಕಲಾವಿದರಿಗೆ ಮಣೆ ಹಾಕುತ್ತಾರಂತೆ ನಿರ್ದೇಶಕ ಸುಕುಮಾರ್. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net