'ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ'ಗೆ ಉಮಾಶ್ರೀ ಮಾತು

Kshamisi Nimma Kaatheyalli Hana Illa - Final
Published on

ಬೆಂಗಳೂರು: ಬಹಳ ವರ್ಷಗಳ ನಂತರ ದಿಗಂತ್ ಹಾಗೂ ಐಂದ್ರಿತ ರೇ ಜತೆಯಾಗಿ ನಟಿಸಿರುವ 'ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದ ಚಿತ್ರೀಕರಣ ಕಳೆದ ತಿಂಗಳೇ ಮುಗಿದಿದ್ದು, ಇದೀಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಶುರುವಾಗಿವೆ.

ಚಿತ್ರದ ಎಡಿಟಿಂಗ್ ಕೆಲಸಗಳು ಈಗಾಗಲೇ ಮುಗಿದಿದ್ದು, ಪ್ರಜ್ವಲ್ ಪೈ ಅವರ‌ ಸ್ಟುಡಿಯೋದಲ್ಲಿ ಡಬ್ಬಿಂಗ್​ ಕೆಲಸ ನಡೆಯುತ್ತಿದೆ. ಅದರ ಮೊದಲ ಹಂತವಾಗಿ, ಹಿರಿಯ ನಟಿ ಉಮಾಶ್ರೀ ಅವರು ಡಬ್ಬಿಂಗ್​ ಮಾಡಿದ್ದು, ತಮ್ಮ ಭಾಗವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಸದ್ಯದಲ್ಲೇ ಬೇರೆ ನಟ-ನಟಿಯರು ಸಮ ತಮ್ಮ ಭಾಗದ ಡಬ್ಬಿಂಗ್​ ಕೆಲಸಗಳನ್ನು ಮುಗಿಸಲಿದ್ದಾರೆ.

ಈ ಚಿತ್ರವನ್ನು ಪತ್ರಕರ್ತ ವಿನಾಯಕ ಕೊಡ್ಸಾರ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಅವರೇ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ದಿಗಂತ್​ ಈ ಚಿತ್ರದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರ ಮತ್ತು ಗೊಬ್ಬರದ ಅಂಗಡಿಯ ಮಾಲೀಕನಾಗಿ ಅಭಿನಯಿಸಿದ್ದಾರೆ. ಅವನ ಜೀವನದಲ್ಲಿ ನಡೆಯುವ ಹಲವು ಘಟನೆಗಳನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ.

ಮೂಲತಃ ಮಲೆನಾಡಿನ ತೀರ್ಥಹಳ್ಳಿಯವರಾದ ದಿಗಂತ್​ ಅವರಿಗೆ ಮಲೆನಾಡಿನ ಭಾಗದಲ್ಲಿ ಚಿತ್ರೀಕರಣ ಮಾಡಿದ್ದು ತುಂಬಾ ಖುಷಿಯ ವಿಚಾರವಂತೆ. 'ಈ ಚಿತ್ರದ ಕಥೆ ನನಗೆ ಬಹಳ ಇಷ್ಟವಾಯಿತು. ಟಿಪಿಕಲ್​ ಮಲೆನಾಡಿನ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಏಳು ವರ್ಷಗಳ ನಂತರ ಐಂದ್ರಿತಾ ರೇ ಜತೆಗೆ ನಟಿಸುತ್ತಿದ್ದೇನೆ. ನಾವು ಮದುವೆಯಾದ ಮೇಲೆ ನಮ್ಮಿಬ್ಬರ ಅಭಿನಯದಲ್ಲಿ ಚಿತ್ರ ಮಾಡುವುದಕ್ಕೆ ಹಲವರು ಬಂದರು. ಆದರೆ, ಕಥೆಗಳು ಇಷ್ಟ ಆಗುತ್ತಿರಲಿಲ್ಲ. ಈ ಚಿತ್ರದಲ್ಲಿ ಐಂದ್ರಿತಾಗೆ ಬಹಳ ಒಳ್ಳೆಯ ಪಾತ್ರವಿದೆ. ಈ ಪಾತ್ರ ನೀನೇ ಮಾಡಿದರೆ ಚೆನ್ನ ಎಂದು ಹೇಳಿದ್ದೆ. ಅದಕ್ಕೆ ಸರಿಯಾಗಿ ಅವರೂ ಒಪ್ಪಿ ಈ ಚಿತ್ರದಲ್ಲಿ ನಟಿಸಿದ್ದಾರೆ' ಎನ್ನುತ್ತಾರೆ ದಿಗಂತ್​.

ಈ ಚಿತ್ರದಲ್ಲಿ ದಿಗಂತ್​ ಅಲ್ಲದೆ ಐಂದ್ರಿತಾ ರೇ, 'ಕನ್ನಡತಿ' ಖ್ಯಾತಿಯ ರಂಜಿನಿ ರಾಘವನ್​, ಉಮಾಧ್ರೀ, ರವಿಕಿರಣ್​, ಕಾಸರಗೋಡು ಚಿನ್ನ, ಪಿ.ಡಿ. ಸತೀಶ್​ ಹಾಗೂ ನೀನಾಸಂನ ಹಲವು ಕಲಾವಿದರು ನಟಿಸಿದ್ದು, ಸಾಗರ, ಸಿಗಂದೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ಉಪ್ಪಿ ಎಂಟರ್ ಟೈನರ್ ಲಾಂಛನದಲ್ಲಿ ಸಿಲ್ಕ್ ಮಂಜು ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನವಿದೆ. ರವೀಂದ್ರ ಜೋಶಿ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದರೆ, ನಂದ ಕಿಶೋರ್ ಎನ್ ರಾವ್ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net