

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಜೈಲುಪಾಲಾಗಿದ್ದ ಬಹುಭಾಷಾ ನಟಿ ಸಂಜನಾ ಗಲ್ರಾನಿಗೆ ಜಾಮೀನು ಸಿಕ್ಕಿದೆ.
ಡ್ರಗ್ಸ್ ಕೇಸ್ನಲ್ಲಿ ಸಂಜನಾ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸೆ.8ರ ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದರು. ಅಂದಿನಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ಸಂಜನಾರನ್ನು ತೀವ್ರ ವಿಚಾರಣೆಗೆ ಒಳಪಟ್ಟಿದ್ದರು. ಸೆ.16ರಂದು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಸಂಜನಾ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ‘ಮಾದಕ’ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ ಬೆನ್ನಲ್ಲೇ ಸಂಜನಾ ಕೂಡ ಜೈಲು ಸೇರಿದ್ದರು. ಇದೀಗ ಸಂಜನಾಗೆ ಜಾಮೀನು ಸಿಕ್ಕಿದ್ದು, ರಾಗಿಣಿ ದ್ವಿವೇದಿಗೆ ಜೈಲೂಟವೇ ಗಟ್ಟಿ.
ಅನಾರೋಗ್ಯದಿಂದ ಬಳಲುತ್ತಿರುವ ಸಂಜನಾಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವಾಣಿವಿಲಾಸ ಆಸ್ಪತ್ರೆ ವೈದ್ಯರು ಹೈಕೋರ್ಟ್ಗೆ ವರದಿ ಸಲ್ಲಿಸಿದ್ದರು. ಹಾಗಾಗಿ ಚಿಕಿತ್ಸೆ ಪಡೆಯಲು ಜಾಮೀನು ನೀಡುವಂತೆ ಕೋರಿ ಸಂಜನಾ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.
ಶುಕ್ರವಾರ ವಿಚಾರಣೆ ನಡೆಸಿದ ಹೈಕೋಟ್ ಏಕಸದಸ್ಯ ಪೀಠವು, ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಸಂಜನಾಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.