

ಬೆಂಗಳೂರು: ‘ಲಾಕ್ಡೌನ್ ಅವಧಿಯಲ್ಲಿ ಕಥೆ ಕೇಳುವುದೇ ನನ್ನ ಕೆಲಸವಾಗಿತ್ತು. ಈಗಲೂ ಕಥೆ ಕೇಳಿಕೊಂಡೇ ಟೈಮ್ ಪಾಸ್ ಮಾಡುತ್ತಿದ್ದೇನೆ. ಆದರೆ, ಒಂದೇ ಒಂದು ಕಥೆಯೂ ನನ್ನನ್ನು ಸೆಳೆಯಲಿಲ್ಲ ...’
ಹೀಗೆ ನೇರವಾಗಿ ಅನಿಸಿದ್ದನ್ನು ಹೇಳಿಕೊಂಡರು ಡಾ. ರಾಜ್ಕುಮಾರ್ ಮೊಮ್ಮಗಳು, ನಟ ರಾಮ್ುಮಾರ್ ಪುತ್ರಿ ಧನ್ಯಾ. ಈಗಾಗಲೇ ಸೂರಜ್ ಗೌಡ ಜತೆಗೆ ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಅವರು, ಆ ಚಿತ್ರದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಈಗ ಹೊಸ ಪ್ರಾಜೆಕ್ಟ್ಗಳತ್ತ ಗಮನ ಹರಿಸುತ್ತಿದ್ದಾರೆ.
ಈ ನಡುವೆಯೇ ‘ವಿಜಯವಾಣಿ’ ಜತೆಗೆ ಮಾತಿಗೆ ಸಿಕ್ಕ ಅವರು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನನ್ನ ಮೊದಲ ಸಿನಿಮಾ ಹೇಗಿರಬೇಕಿತ್ತು ಅಂದುಕೊಂಡಿದ್ದೆನೋ ಅದೇ ರೀತಿಯಲ್ಲಿ ಸಿನಿಮಾ ತಯಾರಾಗಿದೆ. ಸಿನಿಮಾ ಹೇಗೆ ಮುಗಿಯಿತು ಎಂದೇ ಗೊತ್ತಾಗಿಲ್ಲ. ಈಗಾಗಲೇ ಬಿಡುಗಡೆ ಆಗಿರುವ ‘ಮಳೆ ಮಳೆ ...’ ಹಾಡಿಗೆ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಹಾಡು ಬಿಡುಗಡೆ ಆಗಲಿದೆ’ ಎನ್ನುತ್ತಾರೆ ಅವರು.
ಮಿಸ್ಟರಿ ಕಥೆಯ ಹುಡುಕಾಟದಲ್ಲಿ: ‘ಲಾಕ್ಡೌನ್ ಅವಧಿ ಮುಗಿದ ಬಳಿಕ ಸಿನಿಮಾ ಕಥೆ ಕೇಳುವುದನ್ನೇ ಕೆಲಸ ಮಾಡಿಕೊಂಡಿದ್ದೇನೆ. ಇಲ್ಲಿಯವರೆಗೂ ಸಾಕಷ್ಟು ಸ್ಕ್ರಿಪ್ಟ್ ನೋಡಿದ್ದೇನೆ. ಆದರೆ, ನನಗೆ ಸೂಟ್ ಆಗುವಂಥ ಪಾತ್ರಗಳು ಸಿಗುತ್ತಿಲ್ಲ. ಇವೆಲ್ಲದರ ನಡುವೆ ‘ನಿನ್ನ ಸನಿಹಕೆ’ ಸಿನಿಮಾ ಬಿಡುಗಡೆ ಆದ ಬಳಿಕ ಹೊಸ ಪಾತ್ರಗಳು ಅರಸಿ ಬರಬಹುದು. ನನಗೆ ಮಿಸ್ಟರಿ, ಥ್ರಿಲ್ಲರ್ ಶೈಲಿಯ ಸಿನಿಮಾಗಳು ಇಷ್ಟ. ‘ನಿನ್ನ ಸನಿಹಕೆ’ ಬಿಡುಗಡೆ ಆದಮೇಲೆ ನಾನು ಹೇಗೆ ಕಾಣಿಸಿಕೊಳ್ಳಬೇಕೆಂಬುದನ್ನು ಆಡಿಯನ್ಸ್ ಆಯ್ಕೆ ಮಾಡಲಿದ್ದಾರೆ’ ಎಂಬುದು ಧನ್ಯಾ ಮಾತು.
ಚಿತ್ರಮಂದಿರದಲ್ಲಿಯೇ ಬರಬೇಕು: ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡದೆ, ಓಟಿಟಿ ವೇದಿಕೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಗ್ಗೆಯೂ ಪ್ರತಿಕ್ರಿಯಿಸುವ ಧನ್ಯಾ, ‘ಸಿನಿಮಾ ಮಾಡುವುದೇ ದೊಡ್ಡ ಪರದೆಗಾಗಿ. ಆ ಸಂಭ್ರಮವೇ ಮಜ. ಆ ಅನುಭವವನ್ನು ಪಡೆಯಬೇಕು. ಯಾವಾಗ ಸಿನಿಮಾ ಬಿಡುಗಡೆ ಆಗುತ್ತೋ, ಆ ಜನಸಾಗರವನ್ನು ಯಾವಾಗ ನೋಡುತ್ತೇನೋ ಎಂದೆನಿಸಿದೆ’ ಎನ್ನುತ್ತಾರೆ.