

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದಿರುವ ಡಾ.ರಾಜ್ ಕಪ್ ಟೂರ್ನಿ ಈ ಸಲ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ನಡೆಯಲಿದೆ. ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಐದನೇ ವರ್ಷದ ಡಾ.ರಾಜ್ ಕ್ರಿಕೆಟ್ ಟೂರ್ನಿ ಜೊತೆಗೇ ಪುನೀತ್ ರಾಜಕುಮಾರ್ ಸ್ಮರಣೆಯೂ ನಡೆಯಲಿದೆ.
ಐದನೇ ವರ್ಷದ ಡಾ.ರಾಜ್ ಕ್ರಿಕೆಟ್ ಕಪ್ ಟೂರ್ನಿ ಮೇ 13,14 ಹಾಗೂ 15ರಂದು ನಡೆಯಲಿದೆ ಎಂದು ನೃತ್ಯ ನಿರ್ದೇಶಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಪ್ರದರ್ಶಕರು, ಶಾಸಕರು, ಪತ್ರಕರ್ತರು, ಕಾರ್ಮಿಕರು ಹಾಗೂ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದವರು ಭಾಗವಹಿಸಲಿದ್ದಾರೆ. ವಿಶೇಷವೆಂದರೆ ಅವರೆಲ್ಲರ ಜತೆಗೆ ತಂಡದಲ್ಲಿ ಒಬ್ಬ ಕಾಮನ್ ಮ್ಯಾನ್ ಕೂಡ ಇರುತ್ತಾರೆ ಎಂದು ತಿಳಿಸಿದರು.
ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿಯು ಬೆಂಗಳೂರಿನ ಬಿಜಿಎಸ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಇನ್ನು ಈ ಕಪ್ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾವಳಿ ದುಬೈನ ಶಾರ್ಜಾದಲ್ಲಿ ಜೂನ್ ಮೊದಲವಾರ ನಡೆಯಲಿದೆ ಎಂದು ಅವರು ತಿಳಿಸಿದರು. ಇಡೀ ಚಿತ್ರೋದ್ಯಮ ಒಟ್ಟಾಗಿ ಸೇರಿ ಮಾಡುವ ಕಾರ್ಯಕ್ರಮವಿದು. ಇದಕ್ಕೆ ಚೇಂಬರ್ ಬೆಂಬಲ ಕೂಡ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹೇಳಿದರು.
ಚಿತ್ರೋದ್ಯಮದಲ್ಲಿ ಸೌಹಾರ್ದಯುತ ವಾತಾವರಣ ಉಂಟು ಮಾಡುವ ಕೆಲಸವೂ ಈ ಮೂಲಕ ನಡೆಯುತ್ತಿದೆ. ರಾಜ್ ಕಪ್ ಟೂರ್ನಿಯಲ್ಲಿ ರಾಜ್ ಜತೆಗೆ ಪುನೀತ್ ಹೆಸರು ಕೂಡ ಸೇರಿಕೊಂಡಿದೆ ಎಂದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ. ಪುನೀತ್ ಅವರು ಒಂದು ತಂಡದ ನೇತೃತ್ವ ವಹಿಸಿಕೊಳ್ಳಬೇಕಿತ್ತು. ಆದರೆ ಅವರ ಸ್ಮರಣಾರ್ಥ ಟೂರ್ನಿ ನಡೆಸಬೇಕಾಗಿದೆ. 2011ರಲ್ಲಿ ನಿರ್ಮಾಪಕರ ಸಂಘ ಈ ಕಪ್ ಗೆದ್ದಿತ್ತು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ಕುಮಾರ್ ತಿಳಿಸಿದರು. ನಿರ್ಮಾಪಕ ಕೆ. ಮಂಜು, ಎನ್.ಎಂ. ಸುರೇಶ್, ನಾಗಣ್ಣ, ಗಣೇಶ್, ಫೈವ್ಸ್ಟಾರ್ ಗಣೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.