

ಬೆಂಗಳೂರು: ಹೀರೋಗಳ ಹುಟ್ಟುಹಬ್ಬದಂದು ಚಿತ್ರ ಬಿಡುಗಡೆ ಮಾಡುವುದು ಹಳೆಯ ಸಂಪ್ರದಾಯ. ದಿಗಂತ್ ಹುಟ್ಟುಹಬ್ಬವನ್ನು ನಾಳೆ ಮಂಗಳವಾರ (ಡಿ.28) ಆಚರಿಸಿಕೊಳ್ಳುತ್ತಿದ್ದು, ಅದಾಗಿ ಮೂರನೆಯ ದಿನಕ್ಕೆ ಅವರ ಹೊಸ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಹುಟ್ಟುಹಬ್ಬದ ಖುಷಿಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಅಂದಹಾಗೆ, ಚಿತ್ರದ ಹೆಸರು ‘ಹುಟ್ಟುಹಬ್ಬದ ಶುಭಾಶಯಗಳು’.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ನಡಿ ಟಿ.ಆರ್. ಚಂದ್ರಶೇಖರ್ ನಿರ್ವಿುಸಿರುವ ಈ ಚಿತ್ರ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು. ಆದರೆ, ಲಾಕ್ಡೌನ್ನಿಂದ ಎಲ್ಲವೂ ನಿಧಾನವಾಗಿ ಚಿತ್ರ ಈಗ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ, ಉಪೇಂದ್ರ ಚಿತ್ರದ ಟ್ರೇಲರ್ ಸಹ ಬಿಡುಗಡೆ ಮಾಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ದಿಗಂತ್ ಪಾತ್ರವೇನು ಎಂಬುದನ್ನು ರಹಸ್ಯವಾಗಿಡಲಾಗಿದೆ. ‘ಸಸ್ಪೆನ್ಸ್ ಚಿತ್ರವಾದ್ದರಿಂದ ಕಥೆ ಮತ್ತು ಪಾತ್ರದ ಬಗ್ಗೆ ಹೇಳುವ ಹಾಗಿಲ್ಲ. ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂಬ ಖುಷಿಯಿದೆ. ಈ ಚಿತ್ರಕ್ಕೆ ಎಲ್ಲರ ಬೆಂಬಲವಿರಲಿ’ ಎನ್ನುತ್ತಾರೆ. ದಿಗಂತ್ಗೆ
ನಾಯಕಿಯಾಗಿ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಕವಿತಾ ಗೌಡ ಅಭಿನಯಿಸಿದ್ದಾರೆ. ಕಳೆದ ತಿಂಗಳಷ್ಟೇ ಕವಿತಾ ಅಭಿನಯದ ‘ಗೋವಿಂದ ಗೋವಿಂದ’ ಬಿಡುಗಡೆಯಾಗಿತ್ತು. ಈಗ ಒಂದೇ ತಿಂಗಳಲ್ಲಿ ಅವರ ಎರಡನೆಯ ಚಿತ್ರ ಬಿಡುಗಡೆಯಾಗುತ್ತಿದೆ. ನಾಗರಾಜ್ ಬೆತ್ತುರ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.