ದ್ವಿಪಾತ್ರಗಳು ಶುರುವಾಗಿದ್ದೇ ಡಾ. ರಾಜ್ ಚಿತ್ರಗಳಿಂದ...

Dr Raj
Published on

ಬೆಂಗಳೂರು: ಕನ್ನಡದಲ್ಲಿ ಇದುವರೆಗೂ ಹಲವು ಬಹುಪಾತ್ರಗಳಿರುವ ಚಿತ್ರಗಳು ಬಂದಿವೆ. ಆದರೆ, ಮೊದಲಿಗೆ ಅಂಥದ್ದೊಂದು ಪರಿಕಲ್ಪನೆ ಶುರುವಾಗಿದ್ದು ಡಾ. ರಾಜಕುಮಾರ್ ಅಭಿನಯದ ‘ಸತಿ ಶಕ್ತಿ’ ಚಿತ್ರದಿಂದ. ಈ ಚಿತ್ರದಲ್ಲಿ ರಾಜಕುಮಾರ್ ಅವರು ವಿರೂಪಾಕ್ಷ ಮತ್ತು ರಕ್ತಾಕ್ಷ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಪ್ರಾರಂಭವಾದ ಅವರ ಬಹುಪಾತ್ರಗಳೊಂದಿಗಿನ ಒಡನಾಟ, ನಂತರ ಹಲವು ವರ್ಷಗಳ ಕಾಲ ಮುಂದುವರೆಯಿತು.

‘ಸತಿ ಶಕ್ತಿ’ ಚಿತ್ರದ ನಂತರ ಅವರು ‘ಎಮ್ಮೆ ತಮ್ಮಣ್ಣ’, ‘ಭಲೇ ಜೋಡಿ’, ‘ಬಾಳು ಬೆಳಗಿತು’, ‘ದಾರಿ ತಪ್ಪಿದ ಮಗ’, ‘ಬಬ್ರುವಾಹನ’, ‘ನಾನೊಬ್ಬ ಕಳ್ಳ’, ‘ರವಿಚಂದ್ರ’, ‘ಅದೇ ಕಣ್ಣು’ ಮುಂತಾದ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡರು. ‘ಅದೇ ಕಣ್ಣು’, ರಾಜಕುಮಾರ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡ ಕೊನೆಯ ಚಿತ್ರವಾಯಿತು. ಇದಲ್ಲದೆ ‘ಕುಲಗೌರವ’ ಮತ್ತು ‘ಶಂಕರ್ ಗುರು’ ಚಿತ್ರಗಳಲ್ಲಿ ರಾಜಕುಮಾರ್ ತ್ರಿಪಾತ್ರಗಳಲ್ಲಿ ನಟಿಸಿರುವುದು ವಿಶೇಷ. 1971ರಲ್ಲಿ ಬಿಡುಗಡೆಯಾದ ಪೇಕೇಟಿ ಶಿವರಾಂ ನಿರ್ದೇಶನದ ‘ಕುಲಗೌರವ’ ಚಿತ್ರವು ಕನ್ನಡದಲ್ಲಿ ಯಶಸ್ವಿಯಾಗುವುದರ ಜತೆಗೆ ತೆಲುಗು ಮತ್ತು ತಮಿಳಿಗೆ ರೀಮೇಕ್ ಆಯ್ತು.

ಇದಾಗಿ ಕೆಲವೇ ವರ್ಷಗಳಲ್ಲಿ ‘ಶಂಕರ್ ಗುರು’ ಚಿತ್ರದಲ್ಲಿ ಅಪ್ಪ ಮತ್ತು ಇಬ್ಬರು ಮಕ್ಕಳಾಗಿ ರಾಜ್ ನಟಿಸಿದರು. ಈ ಚಿತ್ರವೂ ಯಶಸ್ವಿಯಾಗುವುದರ ಜತೆಗೆ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ರೀಮೇಕ್ ಆಯಿತು. ಈ ಪೈಕಿ ತಮಿಳು ಚಿತ್ರದಲ್ಲಿ ಶಿವಾಜಿ ಗಣೇಶನ್ ನಟಿಸಿದರೆ, ತೆಲುಗು ಮತ್ತು ಹಿಂದಿಯಲ್ಲಿ ಕ್ರಮವಾಗಿ ಕೃಷ್ಣ ಮತ್ತು ಅಮಿತಾಭ್ ಬಚ್ಚನ್ ನಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net