ಗಾಂಧಿನಗರದಲ್ಲಿ ತಯಾರಾಗುತ್ತಿದೆ 'ಡೋಸ್'​; ತಯಾರಿಗೆ ನಿಂತಿದೆ ಉತ್ಸಾಹಿ ಯುವಕರ ತಂಡ..

Dose
Published on

ಬೆಂಗಳೂರು: ಕಳೆದ ಒಂದು ವರ್ಷದಿಂದ ಎಲ್ಲಿ ನೋಡಿದರಲ್ಲಿ ಬರೀ ಡೋಸ್​ನದ್ದೇ ಸುದ್ದಿ. ಈಗಲೂ ಅಷ್ಟೇ.. ಫಸ್ಟ್​ ಮುಗಿದಿದ್ದರೂ, ಸೆಕೆಂಡ್ ಹಾಗೂ ಬೂಸ್ಟರ್ ಡೋಸ್​ ಇನ್ನೂ ಸದ್ದು ಮಾಡುತ್ತಿವೆ. ಈ ನಡುವೆ ಗಾಂಧಿನಗರದಿಂದಲೂ ಒಂದು ಡೋಸ್ ತಯಾರಾಗುತ್ತಿದೆ.

ಹಾಗಂತ ಇದು ಕರೊನಾ ಲಸಿಕೆಯ ಡೋಸ್ ಅಲ್ಲ. ಅಸಲಿಗೆ ಇದು ರಿಯಲ್ ಅಲ್ಲ, ರೀಲ್ ಡೋಸ್. ಅರ್ಥಾತ್, 'ಡೋಸ್' ಎಂಬ ಟೈಟಲ್​ನಲ್ಲಿ ಕನ್ನಡ ಸಿನಿಮಾವೊಂದು ಮೂಡಿಬರುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ವಿಶಿಷ್ಟ ಆಲೋಚನೆಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಹೊಸದೊಂದು ಕಥಾ ಪ್ರಪಂಚವನ್ನು ಸಿನಿರಸಿಕರಿಗೆ ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಉತ್ಸಾಹಿ ಯುವಕರ ತಂಡ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿದೆ. ಈ ಚಿತ್ರದ ಥೀಮ್ ಪೋಸ್ಟರನ್ನು ನಿರ್ದೇಶಕ ಸಿಂಪಲ್ ಸುನಿ ಬಿಡುಗಡೆ ಮಾಡಿದ್ದಾರೆ.

ಕಾಣಿ ಸ್ಟುಡಿಯೋ ಡಿಸೈನ್ ಮಾಡಿರುವ ಈ ಚಿತ್ರದ ಥೀಮ್ ಪೋಸ್ಟರ್ ಬಗ್ಗೆ ಈಗಾಗಲೇ ತುಂಬಾ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಸಿಂಪಲ್ ಸುನಿ, ಜಯತೀರ್ಥ, ಭಜರಂಗಿ ಲೋಕಿ, ಜಡೇಶ್ ಕುಮಾರ್ ಮುಂತಾದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನೀನಾಸಂ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ, ಕನ್ನಡ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ, ಸಂಭಾಷಣಾಕಾರರಾಗಿ ಗೀತರಚನೆಕಾರರಾಗಿ ಕೆಲಸ ಮಾಡಿದ್ದ ಧನಂಜಯ ದಿಡಗ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ನಿರ್ದೇಶಕರಾಗಿ ಇವರ ಎರಡನೇ ಸಿನಿಮಾ.

ವಿಭಿನ್ನ ರೀತಿಯ ಕಥೆಯ ಎಳೆಯನ್ನು ಇಟ್ಟುಕೊಂಡು, ಹೊಸ ಥರದ ನಿರೂಪಣೆ ಮೂಲಕ, ಅತ್ಯಂತ ಗಾಢವಾದ ಭಾವ ಪ್ರಪಂಚವನ್ನು ಕಟ್ಟಿಕೊಡುವ ಪ್ರಯತ್ನವಿದು. ಚಿತ್ರ ಸೂಪರ್ ನ್ಯಾಚುರಲ್, ಸಸ್ಪೆನ್ಸ್ ಥ್ರಿಲ್ಲರ್ ಜಾನರ್​ನಲ್ಲಿರಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಸಂತೋಷ್ ಕುಮಾರ್, ಅರ್ಜುನ್ ಕಿಶೋರ್ ಚಂದ್ರ, ಹರ್ಷ್ ಅರ್ಜುನ್ ನಟಿಸುತ್ತಿದ್ದಾರೆ. ನವೀನ್ ಸೂರ್ಯ ಅವರ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಚಿತ್ರತಂಡ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಹೊರಡುವ ತಯಾರಿಯಲ್ಲಿದೆ. ಕುಂದಾಪುರದ ಸುತ್ತಲಿನ ಪ್ರದೇಶಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net