ದಯವಿಟ್ಟು ಅಪಪ್ರಚಾರ ಮಾಡಬೇಡಿ; ಸುಳ್ಳುಸುದ್ದಿ ಹಬ್ಬಿಸುವವರಿಗೆ ವಿನೋದ್ ಮನವಿ

Vinod
Published on

ಬೆಂಗಳೂರು: ‘ರಾಬರ್ಟ್’ ಆದ್ಮೇಲೆ ವಿನೋದ್ ಪ್ರಭಾಕರ್ ಒಂದು ಕೋಟಿ ಸಂಭಾವನೆ ಕೇಳುತ್ತಾರೆ ಎಂಬ ಸುದ್ದಿಯೊಂದು ನಿಮ್ಮ ಕಿವಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ. ವಿನೋದ್ ಪ್ರಭಾಕರ್ ಅವರ ಕಿವಿಗಂತೂ ಬಿದ್ದಿದೆ. ಅಷ್ಟೇ ಅಲ್ಲ, ಇದರಿಂದ ಅವರಿಗೆ ಸಾಕಷ್ಟು ಬೇಸರವೂ ಆಗಿದೆ. ಆ ಬೇಸರವನ್ನು ಅವರು ಹೊರಹಾಕಿದ್ದು, ‘ವರದ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ. ಚಿತ್ರದಲ್ಲಿನ ವಿಶೇಷತೆಗಳ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಮಾತನಾಡಿದ ವಿನೋದ್, ತಮ್ಮ ವಿರುದ್ಧ ಮಾಡಲಾಗುತ್ತಿರುವ ಅಪಪ್ರಚಾರದ ಕುರಿತೂ ಮಾತನಾಡಿದರು. ‘ನಾನು ಒಂದು ಕೋಟಿ ಸಂಭಾವನೆ ಕೇಳುತ್ತೇನೆ, ನನಗೆ ದುರಹಂಕಾರ ಜಾಸ್ತಿಯಾಗಿದೆ, ನನ್ನ ಡಿಮಾಂಡ್ ಹೆಚ್ಚುತ್ತಿದೆ ... ಅಂತೆಲ್ಲ ನನ್ನ ಬಗ್ಗೆ ಸುದ್ದಿಗಳನ್ನು ಹಬ್ಬಿಸುತ್ತಾರೆ. ನಾನು ಯಾವತ್ತೂ ಸಂಭಾವನೆ ಡಿಮಾಂಡ್ ಮಾಡಿಲ್ಲ. ಡಿಮಾಂಡ್ ಮಾಡಿದ್ದರೆ ಒಳ್ಳೆಯ ಕಥೆ ಮತ್ತು ಮೇಕಿಂಗ್ ಮಾತ್ರ. ನನ್ನ ಯೋಗ್ಯತೆ ಏನು ನನಗೆ ಗೊತ್ತಿದೆ. ನನ್ನ ಚಿತ್ರ ಎಷ್ಟು ದುಡಿಯುತ್ತದೆ ಎಂಬ ಅಂದಾಜು ನನಗಿದೆ. ಚಿತ್ರಮಂದಿರದಿಂದ ಎಷ್ಟು, ಸ್ಯಾಟ್​ಲೈಟ್ ಮತ್ತು ಡಬ್ಬಿಂಗ್ ಹಕ್ಕುಗಳಿಂದ ಎಷ್ಟು ಬರಬಹುದು ಎಂದು ಗೊತ್ತಿರುವುದರಿಂದ, ಅಷ್ಟರಲ್ಲಿ ಚಿತ್ರ ಮಾಡಿ ಎಂದು ನಿರ್ವಪಕರಿಗೆ ಹೇಳುತ್ತೇನೆ’ ಎನ್ನುತ್ತಾರೆ ವಿನೋದ್.

ನಿರ್ವಪಕರ ಸೇಫ್ಟಿ ತಮ್ಮ ಮುಖ್ಯ ಉದ್ದೇಶ ಎನ್ನುವ ವಿನೋದ್, ‘ನನ್ನ ಸಿನಿಮಾದಿಂದ ಸ್ವಲ್ಪ ಲಾಭ ಬಂದರೂ, ನಿರ್ವಪಕರು ಇನ್ನಷ್ಟು ಚಿತ್ರ ಮಾಡುತ್ತಾರೆ. ಅದರಿಂದ ಹಲವು ಕುಟುಂಬಗಳು ಬದುಕುತ್ತವೆ. ಹಾಗಾಗಿ ಎಲ್ಲರನ್ನೂ ಸೇಫ್ ಮಾಡುವುದಕ್ಕೆ ನೋಡುತ್ತೇನೆ. ಹೀಗಿರುವಾಗ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ನನ್ನ ತಟ್ಟೆಲ್ಲಿರುವ ಅನ್ನ ಒದೆಯುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಕೇಳಿ ಚಿತ್ರ ಮಾಡುವವರು ಸಹ ಹಿಂದೇಟು ಹಾಕುತ್ತಾರೆ. ಹಾಗಾಗಿ, ದಯವಿಟ್ಟು ಅಪಪ್ರಚಾರ ಮಾಡಬೇಡಿ’ ಎಂದು ಬೇಸರದಿಂದಲೇ ಹೇಳುತ್ತಾರೆ ವಿನೋದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net