ಹೊಯ್ಸಳನಾದ ಧನಂಜಯ್; 25ನೇ ಚಿತ್ರದಲ್ಲಿ ದಿಟ್ಟ ಪೊಲೀಸ್ ಅಧಿಕಾರಿಯ ಪಾತ್ರ

Hoysala
Published on

ಬೆಂಗಳೂರು: ಶಿವರಾಜ್​ಕುಮಾರ್ ಅಭಿನಯದಲ್ಲಿ ‘ಹೊಯ್ಸಳ’ ಎಂಬ ಚಿತ್ರವನ್ನು ನಿರ್ವಿುಸಬೇಕು ಎಂಬುದು ನಿರ್ವಪಕ ದಿವಂಗತ ರಾಮು ಆಸೆಯಾಗಿತ್ತು. ಹಲವು ವರ್ಷಗಳ ಹಿಂದೆ ಚಿತ್ರ ಘೋಷಣೆ ಮಾಡಿ, ಒಂದು ಪೋಸ್ಟರ್ ಸಹ ಬಿಡುಗಡೆ ಮಾಡಿದ್ದರು. ಆದರೆ, ಚಿತ್ರ ಕಾರಣಾಂತರಗಳಿಂದ ಸೆಟ್ಟೇರಲಿಲ್ಲ. ಈಗ ಅದೇ ಟೈಟಲ್​ನ ಚಿತ್ರವೊಂದರಲ್ಲಿ ಧನಂಜಯ್ ಅಭಿನಯಿಸುತ್ತಿದ್ದಾರೆ.

ಕಳೆದ ವರ್ಷ ನೇರವಾಗಿ ಅಮೆಜಾನ್ ಪ್ರೖೆಮ್ಲ್ಲಿ ‘ರತ್ನನ್ ಪ್ರಪಂಚ’ ಚಿತ್ರವನ್ನು ಬಿಡುಗಡೆ ಮಾಡಿದ ಮೇಲೆ, ಕೆಆರ್​ಜಿ ಸ್ಟುಡಿಯೋಸ್ ಮುಂದೇನು ಮಾಡಬಹುದು? ಯಾವ ತರಹದ ಚಿತ್ರವನ್ನು ನಿರ್ವಿುಸಬಹುದು ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಆ ಪ್ರಶ್ನೆಗಳಿಗೆ ಶುಕ್ರವಾರ ಉತ್ತರ ಸಿಕ್ಕಿದೆ. ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್ ಮತ್ತು ಯೋಗಿ ಜಿ. ರಾಜ್ ಇದೀಗ ‘ಹೊಯ್ಸಳ’ ಚಿತ್ರವನ್ನು ನಿರ್ವಿುಸುತ್ತಿದ್ದು, ಇದು ಧನಂಜಯ್ ಅಭಿನಯದ 25ನೇ ಚಿತ್ರವಾಗಲಿದ್ದು, ‘ಸಲಗ’ ನಂತರ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ದಿಟ್ಟ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರಂತೆ. ಚಿತ್ರದ ಕಥೆ ಬೆಳಗಾವಿ ಮತ್ತು ಗಡಿಗೆ ಸಂಬಂಧಿಸಿದ್ದು, ಅಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆಯಂತೆ.

ಈ ಹಿಂದೆ ಗಣೇಶ್ ಅಭಿನಯದ ‘ಗೀತಾ’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ನಾಗೇಂದ್ರ, ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಎಸ್.ಎಸ್. ಥಮನ್ ಸಂಗೀತ ಸಂಯೋಜಿಸಿದರೆ, ಮಾಸ್ತಿ ಮಂಜು ಸಂಭಾಷಣೆ ರಚಿಸುತ್ತಿದ್ದಾರೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯುತ್ತಿದೆ. ‘ಹೊಯ್ಸಳ’ ಚಿತ್ರದ ಚಿತ್ರೀಕರಣ ಏಪ್ರಿಲ್​ನಿಂದ ಪ್ರಾರಂಭವಾಗಲಿದ್ದು, ಈ ವರ್ಷದ ರಾಜ್ಯೋತ್ಸವದ ಹೊತ್ತಿಗೆ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net