

ಬೆಂಗಳೂರು: ಡಾಲಿ ಧನಂಜಯ್ ಸದ್ಯ ‘ಹೊಯ್ಸಳ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಅವರ ಅಭಿನಯದ ‘ತೋತಾಪುರಿ’, ‘ಹೆಡ್ ಬುಷ್’ ಮತ್ತು ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಗಳು ಬಿಡುಗಡೆಯಾಗಬೇಕಿವೆ. ‘ಪುಷ್ಪ 2’ ಚಿತ್ರದ ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಇದೆಲ್ಲದರ ಜತೆಗೆ ಧನಂಜಯ್ ಇನ್ನೂ ಒಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಇದು ಅವರ 26ನೇ ಚಿತ್ರವಾಗಲಿದೆ.
ಅಂದಹಾಗೆ, ಹೆಸರಿಡದ ಈ ಚಿತ್ರವನ್ನು ಕನ್ನಡವಲ್ಲದೆ ತೆಲುಗಿನಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ‘ಪುಷ್ಪ’ ಚಿತ್ರದ ನಂತರ ಧನಂಜಯ್, ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಅಲ್ಲಿ ಅವರಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈ ದ್ವಿಭಾಷಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಧನಂಜಯ್ ಜತೆಗೆ ತೆಲುಗಿನ ಸತ್ಯದೇವ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಇದು ಅವರಿಗೂ 26ನೇ ಚಿತ್ರವಂತೆ.
ಈ ಹಿಂದೆ ತೆಲುಗಿನಲ್ಲಿ ‘ಪೆಂಗ್ವಿನ್’ ಎಂಬ ಸಿನಿಮಾ ಮಾಡಿದ್ದ ಈಶ್ವರ್ ಕಾರ್ತಿಕ್, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಕ್ರೖೆಂ ಥ್ರಿಲ್ಲರ್ ಆಗಿದ್ದು ಬಾಲಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ ಮಾಡುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಸದ್ಯದಲ್ಲೇ ಅನಾವರಣಗೊಳಿಸುವುದಕ್ಕೆ ಚಿತ್ರತಂಡ ಸಜ್ಜಾಗಿದೆ.